ಮಾಸ್ಕೋ, ಏ.5- ಚೀನಾ ಜೊತೆಗಿನ ಸಂಬಂಧದಲ್ಲಿ ಎದುರಾಗಿರುವ ಸಂಕೀರ್ಣತೆಗಳು ಮತ್ತು ತೊಡಕುಗಳನ್ನು ಭಾರತ ನಿವಾರಿಸುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ಅಂತಾರಾಷ್ಟ್ರೀಯ ಭದ್ರತೆ ಕುರಿತ ಏಳನೇ ಸಮಾವೇಶದಲ್ಲಿ ಮಾತನಾಡಿದ ಅವರು, ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿನ ಸಾಗರ ಪ್ರದೇಶದಲ್ಲಿ ಪ್ರಾದೇಶಿಕ ವಿವಾದಗಳು ಆಗಾಗ ಉಲ್ಬಣಗೊಳ್ಳುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ವಿಶಾಲ ಅಭಿವೃದ್ದಿ ಸಹಭಾಗಿತ್ವದ ಚೌಕಟ್ಟಿನೊಳಗೆ ಪ್ರಗತಿ ಹೊಂದಲು ನಾವು ಬಯಸುತ್ತೇವೆ. ಸಾಗರ ಪ್ರದೇಶದ ವಿವಾದಗಳು ತುಂಬಾ ಸಂಕೀರ್ಣವಾದ ಸಮಸ್ಯೆ. ಇಂಥ ವಿವಾದಗಳನ್ನು ನಾವು ಶಾಂತಿ ಮಾರ್ಗದ ಮೂಲಕ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕಿದೆ ಎಂದು ಅವರು ಹೇಳಿದರು. ಏಷ್ಯಾ-ಪೆಸಿಫಿಕ್ ಪ್ರಾಂತ್ಯದಲ್ಲಿ ಶಾಂತಿ ನೆಲೆಸಲು ಎಲ್ಲ ದೇಶಗಳು ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ. ಕೆಲವು ದೇಶಗಳ ಏಕಪಕ್ಷೀಯ ಕ್ರಮಗಳಿಂದ ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗೆ ಧಕ್ಕೆಯಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಅವರು ಸಮಾವೇಶದಲ್ಲಿ ಸಲಹೆ ಮಾಡಿದರು.