ನವದೆಹಲಿ: ರೈತರು ಅನ್ನದಾತರಷ್ಟೇ ಅಲ್ಲ ವಿದ್ಯುತ್ ದಾತರೂ ಆಗುತ್ತಾರೆ. ಪಂಪ್ ಸೆಟ್ ಗಳಿಗೆ ಸೋಲಾರ್ ಶಕ್ತಿ ಒದಗಿಸುವ ಯೋಜನೆ ಘೋಷಣೆ ಮಾಡಲಾಗುತ್ತದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಸಂಸತ್ ನಲ್ಲಿ ಇಂದು 2020ನೇ ಸಾಲಿನ ಬಜೆಟ್ ಭಾಷಣ ಮಾಡುತ್ತಿರುವ ನಿರ್ಮಲಾ ಸೀತಾರಾಮನ್ ಅವರು, ರೈತರಿಗಾಗಿ 16 ಅಂಶಗಳ ಕ್ರಿಯಾ ಯೋಜನೆಯನ್ನು ಘೋಷಣೆ ಮಾಡಿದರು. ಈ ವೇಳೆ ‘ರೈತರು ಅನ್ನದಾತರಷ್ಟೇ ಅಲ್ಲ ವಿದ್ಯುತ್ ದಾತರೂ ಆಗುತ್ತಾರೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್ ಅವರು, ಪಂಪ್ ಸೆಟ್ ಗಳಿಗೆ ಸೋಲಾರ್ ಶಕ್ತಿ ಒದಗಿಸುವ ಯೋಜನೆ ಘೋಷಣೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು. ಅಂತೆಯೇ ರೈತರು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್ ಮೂಲಕ ಸರ್ಕಾರವೇ ಖರೀದಿಸಲಿದೆ. ಈ ಮೂಲಕ ಬರಡು ಭೂಮಿಯಲ್ಲಿಯೂ ರೈತರು ಹಣ ಗಳಿಸಬಹುದು ಎಂದು ಹೇಳಿದರು.
‘ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದೊಂದಿಗೆ ಸರ್ಕಾರ ಕೆಲಸ ಮಾಡಿತು. ಮಧ್ಯವರ್ತಿಗಳ ಹಿಡಿತದಿಂದ ರೈತರನ್ನು ಬಿಡುಗಡೆ ಮಾಡಿ, ಮಾರುಕಟ್ಟೆ ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದೆವು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನಾ ಸೇರಿದಂತೆ ಹಲವು ಯೋಜನೆಗಳ ಮೂಲಕ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಪ್ರಯತ್ನಿಸಿದೆವು. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಾದರಿ ಕಾನೂನುಗಳನ್ನು ಜಾರಿ ಮಾಡುವ ರಾಜ್ಯ ಸರ್ಕಾರಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.