ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 13ನೇ ಹಾಗೂ ಕಾಂಗ್ರೆಸ್ ಸರ್ಕಾರದ ಅಂತಿಮ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.
ಚುನಾವಣೆ ಸಮೀಪದಲ್ಲಿರುವುದರಿಂದ ಹಣಕಾಸು ಇತಿಮಿತಿ ಮಧ್ಯೆಯೂ ಮತದಾರರನ್ನು ಓಲೈಸುವ ಅನಿವಾರ್ಯತೆಯಲ್ಲಿ ಸಿಎಂ ಅವಗಿದ್ದು, ಜನಪ್ರಿಯ ಬಜೆಟ್ ಬಜೆಟ್ ಮಂಡನೆ ಮಾಡುವ ನಿರೀಕ್ಷೆಯಿದೆ.
|
ರಾಜ್ಯದಲ್ಲಿ ದಿ. ದೇವರಾಜ ಅರಸು ನಂತರದ ನಾಲ್ಕು ದಶಕಗಳ ಅವಧಿಯಲ್ಲಿ ಐದು ವರ್ಷಗಳ ಪೂರ್ಣಾವಧಿ ಸಿಎಂ ಆಗಿ ಸಿದ್ದರಾಮಯ್ಯ ಅವರು ಸತತ ಆರನೇ ಬಜೆಟ್ ಮಂಡಿಸುತ್ತಿದ್ದಾರೆ. ಮೇನಲ್ಲಿ 15ನೇ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ತಿಂಗಳ ಅವಧಿಗೆ ಲೇಖಾನುದಾನ ಪಡೆಯುವುದಕ್ಕೆ ಸಿದ್ದರಾಮಯ್ಯ ಸೀಮಿತವಾಗಬಹುದಿತ್ತು. ಆದರೂ, ಅನುಷ್ಠಾನ ಬದ್ಧತೆ ಇಲ್ಲದ ಭರವಸೆಗಳ ಮೂಲಕ ಮತದಾರರನ್ನು ಓಲೈಸುವ ಅವಕಾಶ ಬಳಸಿಕೊಂಡು ವಾರ್ಷಿಕ ಬಜೆಟ್ ಮಂಡಿಸುತ್ತಿದ್ದಾರೆ. ಮುಂದೆಯೂ ಅಧಿಕಾರಕ್ಕೆ ಬರುವ ವಿಶ್ವಾಸದೊಂದಿಗೆ ಜನಪ್ರಿಯ ಘೋಷಣೆಗಳ ಆಯ-ವ್ಯಯ ಸಿದ್ಧಪಡಿಸಿದ್ದಾರೆ.
ವಾರ್ಷಿಕ ಶೇ.15 ಏರಿಕೆಯೊಂದಿಗೆ ರಾಜ್ಯದ ಬಜೆಟ್ ಗಾತ್ರ ಈ ಬಾರಿ ಎರಡು ಲಕ್ಷ ಕೋಟಿ ರೂ.ಗಳ ಮೈಲುಗಲ್ಲು ದಾಟುತ್ತಿದೆ. ಬಜೆಟ್ ಗಾತ್ರ 2.10ರಿಂದ 2.14 ಲಕ್ಷ ಕೋಟಿ ರೂ.ಗಳಿಗೆ ನಿಗದಿಯಾಗುವ ನಿರೀಕ್ಷೆಯಿದೆ. ಜಾತ್ಯತೀತ ನಾಯಕರಾಗಿ ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಅಹಿಂದ ಪರ ನಿಲುವಿನ ಜತೆಗೆ, ಈ ಬಾರಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಮಾಜದ ಎಲ್ಲ ವರ್ಗದ ನಿರೀಕ್ಷೆಗಳಿಗೆ ಸ್ಪಂದಿಸಿ ಭರವಸೆ ತುಂಬುವ ಎಚ್ಚರಿಕೆಯ ಪ್ರಯತ್ನವನ್ನು ಸಿದ್ದರಾಮಯ್ಯ ನಡೆಸಲಿದ್ದಾರೆ.