ಭೋಪಾಲ್: ಬರೋಬ್ಬರಿ 1.25 ಕೋಟಿ ರೂ. ಬೆಲೆ ಬಾಳುವ ರೆಡ್ ಸ್ಯಾಂಡ್ ಬೋವಾ ಹಾವನ್ನು ರಕ್ಷಿಸಿ, ಅದನ್ನು ಮಾರಾಟ ಮಾಡಲು ಮುಂದಾಗಿದ್ದ ಮೂವರು ಅಪ್ರಾಪ್ತರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ರೆಡ್ ಸ್ಯಾಂಡ್ ಬೋವಾ ಎಂದು ಕರೆಯಲ್ಪಡುವ ಈ ಹಾವನ್ನು ಕನ್ನಡದಲ್ಲಿ ಮಣ್ಣುಮುಕ್ಕ ಹಾವು ಎಂದು ಕರೆಯಲಾಗುತ್ತದೆ. ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯ ನರಸಿಂಗಗಢ ಪಟ್ಟಣದಲ್ಲಿ ಭಾನುವಾರ ಐವರು ಆರೋಪಿಗಳು ಈ ಹಾವನ್ನು ಮಾರಾಟ ಮಾಡಲು ಹೊರಟಿದ್ದರು. ಆರೋಪಿಗಳು ಹಾವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ನರಸಿಂಗಗಢ ಪಟ್ಟಣದ ಬಸ್ ನಿಲ್ದಾಣದಲ್ಲಿ ಡೀಲ್ ಬಗ್ಗೆ ಫೋನಿನಲ್ಲಿ ಮಾತನಾಡುತ್ತಿದ್ದರು. ಇದನ್ನು ಕೇಳಿಸಿಕೊಂಡ ಸ್ಥಳೀಯರೊಬ್ಬರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಐವರು ಆರೋಪಿಗಳಲ್ಲಿ ಇಬ್ಬರನ್ನು ಪವನ್ ನಗರ್ ಹಾಗೂ ಶ್ಯಾಮ್ ಗುಜರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ಹಾವನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಈ ಹಾವು ಕೆಂಪು ಮರಳು ಬೋವಾ ಜಾತಿಗೆ ಸೇರಿದ್ದು, ಇದರ ಮೌಲ್ಯ ಬರೋಬ್ಬರಿ 1.25 ಕೋಟಿ ರೂ. ಇದೆ ಎನ್ನುವುದು ತಿಳಿದು ಬಂದಿದೆ.
ವಿಚಾರಣೆ ವೇಳೆ ಆರೋಪಿಗಳು ಈ ಹಾವನ್ನು ಸೆಹೋರ್ ಜಿಲ್ಲೆಯಿಂದ ತಂದು ನರಸಿಂಗಗಢದಲ್ಲಿ ಮಾರಾಟ ಮಾಡಲು ಬಂದಿದ್ದರು ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಹಾವಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದ್ದು, ಕೋಟಿಗಟ್ಟಲೆ ಹಣ ಕೊಟ್ಟು ಈ ಹಾವನ್ನು ಜನ ಖರೀದಿ ಮಾಡುತ್ತಾರೆ. ಬೋವಾ ಹಾವು ವಿಷರಹಿತವಾಗಿದ್ದು, ಇದನ್ನು ಹಲವು ಔಷಧಿಗಳಿಗೆ, ಸೌಂದರ್ಯವರ್ಧಕ ಕ್ರೀಮ್ಗಳಲ್ಲಿ ಹಾಗೂ ಮಾಟ ಮಂತ್ರಕ್ಕೆ ಉಪಯೋಗಿಸಲಾಗುತ್ತದೆ. ಅಲ್ಲದೆ ಈ ಹಾವನ್ನು ಮನೆಯಲ್ಲಿ ಸಾಕಿದರೆ ಲಕ್ ಒಲಿದು ಬರುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಹಾವಿಗೆ ಭಾರೀ ಬೇಡಿಕೆ ಇದೆ.