ಹುಬ್ಬಳ್ಳಿ: ಆರು ವರ್ಷದ ಹಿಂದೆ ಕ್ರಿಕೆಟ್ ಆಟದ ಸಂದರ್ಭದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 6.65 ಲಕ್ಷ ರೂಪಾಯಿ ದಂಡ ವಿಧಿಸಿ ಹುಬ್ಬಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಹುಬ್ಬಳ್ಳಿಯ ನಿವಾಸಿಗಳಾದ ಕಲ್ಲಪ್ಪ ಶಿರಕೋಳ, ಸಿದ್ಧಾರೂಡ ಶಿರಕೋಳ, ಅಯ್ಯಪ್ಪ ಶಿರಕೋಳ, ನಿಂಗಪ್ಪ ಶಿಂಧೆ, ಅಯ್ಯಪ್ಪ ಲಕ್ಕುಂಡಿ, ಮಂಜುನಾಥ್ ಉಪ್ಪಾರ, ಶ್ರೀಪಾದ ಪೂಜಾರಿ, ವಿಶಾಲ್ ಜಾಧವ್, ಅಜಯ್ ಗುತ್ತಲ, ಮಂಜುನಾಥ್ ಗೋಕಾಕ್, ಸಂತೋಷ್ ಸುನಾಯಿ, ಅನಿಲ್ ಸಾವಂತ ಈ 12 ಮಂದಿ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳಾಗಿದ್ದಾರೆ.
ಏನಿದು ಪ್ರಕರಣ?
2013ರ ಜೂನ್ 16ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕ್ರಿಕೆಟ್ ಆಡುವ ವೇಳೆ ಯಲ್ಲಾಪುರ ಓಣಿಯ ನಜೀರ್ ಮುದಗಲ್ ಜೊತೆ ಅಪರಾಧಿಗಳು ಜಗಳ ತೆಗೆದು ಹಲ್ಲೆ ನಡೆಸಿದ್ದರು. ನಂತರ ಚಿಟಗುಪ್ಪಿ ವೃತ್ತದಲ್ಲಿ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕು ಇರಿದು ಕೊಲೆಗೆ ಯತ್ನಿಸಿದ್ದರು. ಘಟನೆಯ ವೇಳೆ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ನಜೀರ್, ಚಿಕಿತ್ಸೆ ಫಲಕಾರಿಯಾಗಿದೇ ಮೃತಪಟ್ಟಿದ್ದನು. ಈ ಕೊಲೆ ಪ್ರಕರಣದ ಬಗ್ಗೆ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಘಟನೆಯ ಕುರಿತು ಸುದೀರ್ಘ ವಿಚಾರಣೆ ವಾದ-ವಿವಾದ ಆಲಿಸಿದ್ದ ನ್ಯಾಯಾಲಯ ಡಿಸೆಂಬರ್ 23ರಂದು ಅಂತಿಮ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು. ನ್ಯಾಯಾಧೀಶರಾದ ಕೆ.ಎನ್ ಗಂಗಾಧರ್ ಅವರು ಇದೀಗ ಆರೋಪಿಗಳನ್ನು ಅಪರಾಧಿಗಳೆಂದು ಘೋಷಣೆ ಮಾಡಿ, ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.