ಬೆಂಗಳೂರು,ಡಿ.30- ರಾಜ್ಯದ ನೆಲ-ಜಲ, ಭಾಷೆ, ಗಡಿ ಸೇರಿದಂತೆ ಯಾವುದೇ ವಿಷಯದಲ್ಲೂ ನಮ್ಮ ಸರ್ಕಾರ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡಿಗರ ಹಿತ ಕಾಪಾಡುವ ವಿಷಯದಲ್ಲಿ ನಮ್ಮ ಪಕ್ಷ ಹಾಗೂ ಸರ್ಕಾರ ಸದಾ ಬದ್ಧವಾಗಿದೆ. ಕನ್ನಡಿಗರ ಹಿತವನ್ನು ಬಲಿಕೊಟ್ಟು ನಾವು ರಾಜಕಾರಣ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ಬೆಳಗಾವಿ, ಕಾರವಾರ ಸೇರಿದಂತೆ ಮತ್ತಿತರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆಯನ್ನು ಖಂಡಿಸಿದ ಅವರು, ಇದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಂದ್ರ ಫಡ್ನವೀಸ್ ಅವರ ಹೇಳಿಕೆ ಬಾಲಿಶತನದಿಂದ ಕೂಡಿದೆ. ಬೆಳಗಾವಿ, ಕಾರವಾರ ಸೇರಿದಂತೆ ಮಹಾರಾಷ್ಟ್ರದ ಗಡಿಭಾಗಗಳು ಕರ್ನಾಟಕಕ್ಕೆ ಸೇರಿವೆ. ಈಗಾಗಲೇ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂದು ಒಪ್ಪಿಕೊಳ್ಳಲಾಗಿದೆ. ಆದರೂ ಮಹಾರಾಷ್ಟ್ರದವರು ಗಡಿ ವಿವಾದವನ್ನು ಮುಂದಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಕರ್ನಾಟಕ ಯಾವುದೇ ರಾಜ್ಯಗಳ ಭೂ ಪ್ರದೇಶವನ್ನು ಅಕ್ರಮಿಸಿಕೊಂಡಿಲ್ಲ. ದೇವೇಂದ್ರ ಫಡ್ನವೀಸ್ ಯಾವ ಅರ್ಥದಲ್ಲಿ ಈ ಹೇಳಿಕೆಯನ್ನು ಕೊಟ್ಟಿದ್ದಾರೋ ನನಗೆ ತಿಳಿದಿಲ್ಲ. ಪಾಕ್ ಆಕ್ರಮಿತ ಪ್ರದೇಶವನ್ನು ಭಾರತಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸವನ್ನು ಯಾರೊಬ್ಬರು ಮಾಡಬಾರದು. ಮಹಾರಾಷ್ಟ್ರ ಗಡಿವಿವಾದ ಮುಗಿದ ವಿವಾದ ಎಂದರು.
ಅಕ್ಕಲಕೋಟೆ, ಸಾಂಗ್ಲಿ, ಕೊಲ್ಲಾಪುರ ಸೇರಿದಂತೆ ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದೆ. ವಾಸ್ತವವಾಗಿ ಆ ಪ್ರದೇಶಗಳೇ ನಮ್ಮ ರಾಜ್ಯಕ್ಕೆ ಸೇರಬೇಕು. ಈ ಮೊದಲು ಎಂಇಎಸ್ನವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂಥ ವಿವಾದವನ್ನು ಕೆದಕುತ್ತಿದ್ದರು. ಈಗ ಶಿವಸೇನೆಯವರು ಮುಂದಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದಿಸಿದರು.
ಇನ್ನು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಉಯ್ಯಂಬಳಿ ಹೋಬಳಿ ಬಳಿ ವಿಶ್ವದಲ್ಲೇ ಅತಿ ಎತ್ತರದ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ತೀರ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕಂದಾಯ ಸಚಿವರು ಈ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ. ವರದಿ ಬಂದ ನಂತರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಈ ಹಿಂದೆ ಇದೇ ಡಿ.ಕೆ.ಶಿವಕುಮಾರ್ ಇಸ್ಕಾನ್ ಅವರು ಥೀಮ್ ಪಾರ್ಕ್ ನಿರ್ಮಾಣ ಮಾಡಲು ಮುಂದಾಗ ಅಡ್ಡಿಪಡಿಸಿ ಆ ಯೋಜನೆಯನ್ನು ನಿಲ್ಲುವಂತೆ ಮಾಡಿದರು. ಆದರೆ ನಾವು ಅವರಂತೆ ಮಾಡುವುದಿಲ್ಲ. ಕೃಷ್ಣನೂ ಒಂದೇ ಯೇಸುನೂ ಒಂದೆ. ಒಂದು ವೇಳೆ ಗೋಮಾಳ ಜಮೀನಿನಲ್ಲಿ ಪ್ರತಿಮೆ ನಿರ್ಮಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ಹೀಗಾಗಿ ತನಿಖೆಗೆ ಆದೇಶ ಮಾಡಿದ್ದೇವೆ. ವರದಿ ಬಂದ ನಂತರ ಸರ್ಕಾರ ಸರಿಯಾದ ನಿರ್ಧಾರವನ್ನೇ ಕೈಗೊಳ್ಳಲಿದೆ ಎಂದರು.