ಬೆಂಗಳೂರು, ಡಿ.26-ವಿಧಾನಸಭೆಯಿಂದ ವಿಧಾನಪರಿಷತ್ಗೆ ಚುನಾಯಿತರಾಗಿರುವ ಐವರು, ಪದವೀಧರ ಕ್ಷೇತ್ರದ ಇಬ್ಬರು, ಶಿಕ್ಷಕರ ಕ್ಷೇತ್ರದ ಇಬ್ಬರು ಹಾಗೂ ಐವರು ನಾಮನಿರ್ದೇಶಿತ ಸದಸ್ಯರ ನಿವೃತ್ತಿಯಿಂದ 16 ವಿಧಾನಪರಿಷತ್ನ ಸದಸ್ಯ ಸ್ಥಾನಗಳು ತೆರವಾಗಲಿವೆ.
ಜೂನ್ 23ರಂದು ಐವರು ನಾಮನಿರ್ದೇಶಿತ ಹಾಗೂ ಜೂ.30ರಂದು 11 ಮಂದಿ ಸದಸ್ಯರು ಸೇರಿದಂತೆ ಒಟ್ಟು 16 ಮಂದಿ ನಿವೃತ್ತಿಯಾಗಲಿದ್ದಾರೆ.
ಇದರಿಂದ ರಾಜ್ಯದಲ್ಲಿ ವಿಧಾನಸಭೆ ಉಪಚುನಾವಣೆ ನಂತರ ವಿಧಾನಪರಿಷತ್ನ ಮತ್ತೊಂದು ಚುನಾವಣೆ ಜೂನ್ನಲ್ಲಿ ಎದುರಾಗಲಿದೆ.
ವಿಧಾನಸಭೆಯಿಂದ ವಿಧಾನಪರಿಷತ್ಗೆ ಆಯ್ಕೆಯಾಗಿರುವ ಸದಸ್ಯರಾದ ಕಾಂಗ್ರೆಸ್ನ ಜಯಮ್ಮ, ಎನ್.ಎಸ್.ಬೋಸರಾಜು, ಎಚ್.ಎಂ.ರೇವಣ್ಣ, ನಸೀರ್ ಅಹಮ್ಮದ್, ಜೆಡಿಎಸ್ನ ಟಿ.ಎ.ಶರವಣ ಹಾಗೂ ಮಲ್ಲಿಕಾರ್ಜುನ ಅವರ ಜೂ.30ರಂದು ನಿವೃತ್ತಿಯಾಗಲಿದ್ದಾರೆ.
ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಜೆಡಿಎಸ್ನ ಆರ್.ಚೌಡರೆಡ್ಡಿ ತೂಪಲ್ಲಿ , ಬಿಜೆಪಿಯ ಎಸ್.ಪಿ.ಸುಂಕನೂರ ಹಾಗೂ ಶಿಕ್ಷಕ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆಡಿಎಸ್ನ ಪುಟ್ಟಣ್ಣ, ಕಾಂಗ್ರೆಸ್ನ ಶರಣಪ್ಪ ಮಟ್ಟೂರ್ ಅವರು ಕೂಡ ಜೂ.30ರಂದೇ ವಿಧಾನಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿಯಾಗಲಿದ್ದಾರೆ.
ನಾಮನಿರ್ದೇಶಿತ ಸದಸ್ಯರಾದ ಕೆ. ಅಬ್ದುಲ್ ಜಬ್ಬಾರ್, ಡಾ.ಜಯಮಾಲಾ ರಾಮಚಂದ್ರ, ಐವಾನ್ ಡಿಸೋಜ, ಇಕ್ಬಾಲ್ ಅಹಮ್ಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರ ಅವರು ಜೂ.23ರಂದು ನಿವೃತ್ತಿಯಾಗಲಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾಯಿತರಾದ ರಿಜ್ವಾನ್ ಹರ್ಷದ್ ಅವರಿಂದ ತೆರವಾದ ಸ್ಥಾನ ಖಾಲಿಯಿದ್ದು, ಚುನಾವಣೆ ನಡೆಯಬೇಕಿದೆ.
ಒಂದೇ ಸ್ಥಾನ ಇರುವುದರಿಂದ ಚುನಾವಣೆ ನಡೆದರೆ ವಿಧಾನಸಭೆಯಲ್ಲಿ ಹೆಚ್ಚು ಸ್ಥಾನ ಹೊಂದಿರುವ ಆಡಳಿತಾರೂಢ ಬಿಜೆಪಿಗೆ ಈ ಸ್ಥಾನ ಸುಲಭದ ಆಯ್ಕೆಯಾಗಲಿದೆ.
ಈಗಾಗಲೇ ಭಾರತೀಯ ಚುನಾವಣಾ ಆಯೋಗ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕೈಗೊಂಡಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳಿಂದ ಸ್ಪರ್ಧಿಸುವ ಆಕಾಂಕ್ಷಿಗಳು ಚುನಾವಣಾ ಸಿದ್ಧತೆಯಲ್ಲೂ ನಿರತರಾಗಿದ್ದಾರೆ.
ಆದರೆ ವಿಧಾನಸಭೆಯಿಂದ ವಿಧಾನಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳಲಿದೆ. ವಿಧಾನಸಭೆಯಲ್ಲಿ ಈಗಿರುವ ರಾಜಕೀಯ ಪಕ್ಷಗಳ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ 2, ಬಿಜೆಪಿ 3, ಜೆಡಿಎಸ್ 1 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ.
ಆಡಳಿತಾರೂಢ ಬಿಜೆಪಿ ನಾಲ್ಕನೇ ಸ್ಥಾನವನ್ನು ಪಡೆಯಲು ಪಕ್ಷೇತರರು ಹಾಗೂ ಇತರೆ ಶಾಸಕರ ಬೆಂಬಲವನ್ನು ಪಡೆಯಬೇಕಾಗುತ್ತದೆ ಎಂಬುದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ.
ನಿವೃತ್ತಿಯಾಗುವ ಐದು ಮಂದಿ ನಾಮನಿರ್ದೇಶಿತ ಸದಸ್ಯರ ಸ್ಥಾನಕ್ಕೆ ಸರ್ಕಾರವೇ ನಾಮನಿರ್ದೇಶನ ಮಾಡುವುದರಿಂದ ಬಿಜೆಪಿಗೆ ಸಹಜವಾಗಿಯೇ ಅನುಕೂಲವಾಗಲಿದೆ.
ಜೂನ್ನಲ್ಲಿ ಮತ್ತೆ ವಿಧಾನಪರಿಷತ್ನ ಚುನಾವಣೆಯ ಮಿನಿ ಸಮರ ರಾಜ್ಯದಲ್ಲಿ ನಡೆಯಲಿದೆ.