ಪೌರತ್ವ ತಿದ್ದುಪಡಿ ಕಾಯ್ದೆ; ನೇತಾಜಿ ಸಂಬಂಧಿ ಚಂದ್ರಕುಮಾರ್ ಬೋಸ್ ಟ್ವೀಟ್ ನಲ್ಲೇನಿದೆ?

ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ನೇತಾಜಿ ಸುಭಾಶ್ಚಂದ್ರ ಬೋಸ್ ಸಂಬಂಧಿ, ಪಶ್ಚಿಮಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಕೂಡಾ ವಿರೋಧ ವ್ಯಕ್ತಪಡಿಸಿದ್ದಾರೆ.

“ಒಂದು ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ 2019 ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದಾದರೆ ಯಾಕೆ ಕೇವಲ ಹಿಂದು, ಸಿಖ್, ಬೌದ್ಧ, ಕ್ರಿಶ್ಚಿಯನ್, ಪಾರ್ಸಿ ಮತ್ತು ಜೈನರು ಎಂದು ಹೇಳಬೇಕು. ಯಾಕೆ ಮುಸ್ಲಿಮರನ್ನು ಸೇರ್ಪಡೆಗೊಳಿಸಿಲ್ಲ. ಹೀಗಾದರೆ ಮಾತ್ರ ಅದು ಪಾರದರ್ಶಕವಾಗಲಿದೆ ಎಂದು ಬೋಸ್ ಟ್ವೀಟರ್ ನಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭಾರತವನ್ನು ಬೇರೆ ಯಾವುದೇ ದೇಶದ ಜತೆ ಯಾಕೆ ಹೋಲಿಸಬೇಕು. ಒಂದು ದೇಶವಾಗಿ ಎಲ್ಲಾ ಧರ್ಮ, ವರ್ಗಗಳಿಗೆ ಸಮಾನ ಅವಕಾಶಗಳಿವೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ನೂತನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಬಿಜೆಪಿ ಪಶ್ಚಿಮಬಂಗಾಳದಲ್ಲಿ ಪಾದಯಾತ್ರೆ ನಡೆಸಿದ ದಿನದಂದೇ ಬೋಸ್ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ನಡೆಸಿದ ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು. ಅಲ್ಲದೇ ಬಿಜೆಪಿ ಸಿಎಎ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ವರದಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ