ಮೈಸೂರು, ಡಿ.22- ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತದೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದರು.
ನಗರದ ಪುರಭವನದ ಬಳಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಾರ್ಯಕರ್ತರೊಂದಿಗೆ ಪ್ರತಿಭಟನೆಗೆ ಮುಂದಾದಾಗ ಪೋಲೀಸರು ಅವರನ್ನು ತಡೆದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾವು ಇಂದು ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದೆವು. ಆದರೆ, ಪೋಲೀಸರು ನಮ್ಮನ್ನು ತಡೆದಿದ್ದಾರೆ. ನಾವು ಈ ಹಿಂದೆ ಪ್ರತಿಭಟನೆಗೆ ಮುಂದಾದಾಗಲೂ ನಿಷೇಧಾಜ್ಞೆ ಹೇರಿದ್ದರು. ಇಂದೂ ಸಹ ಪ್ರತಿಭಟನೆಗೆ ಅವಕಾಶ ನೀಡಿಲ್ಲ. ಹೀಗಾಗಿ ನಿಷೇಧಾಜ್ಞೆ ಎಂದು ತೆರವುಗೊಳಿಸುತ್ತೀರಾ ಎಂಬ ಪ್ರಶ್ನೆಗೆ ಪೋಲೀಸರ ಬಳಿ ಉತ್ತರವಿಲ್ಲ ಎಂದರು.
ಸರ್ಕಾರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮೈಸೂರಿನಲ್ಲಿ ಪ್ರತಿಭಟನೆ ನಡೆದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಿದ್ದರೂ ನಿಷೇಧಾಜ್ಞೆಯನ್ನು ಪೋಲೀಸರು ಜಾರಿ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸುವ ಅವಶ್ಯಕತೆಯೇ ಇಲ್ಲ ಎಂದು ತಿಳಿಸಿದರು.
ಪ್ರತಿಭಟನೆ ಮಾಡುವವರೆಲ್ಲ ಹಿಂಸಾಚಾರಿಗಳಲ್ಲ. ಸರ್ಕಾರ ಪ್ರಜೆಗಳಿಗೆ ಮಾಡುತ್ತಿರುವ ಅವಮಾನ ಇದಾಗಿದೆ ಎಂದು ಅವರು, ಇದೊಂದು ರಾಜಕೀಯ ಹುನ್ನಾರ ಎಂದು ಕಿಡಿಕಾರಿದರು.