ನವದೆಹಲಿ/ಲಕ್ನೋ, ಡಿ.21-ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮುಂದುವರೆದಿರುವ ಹಿಂಸಾತ್ಮಕ ಹೋರಾಟಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದಿದ್ದು , ಉತ್ತರ ಪ್ರದೇಶದಲ್ಲಿ ನಿನ್ನೆ ನಡೆದ ಗಲಭೆಯನ್ನು ಹತ್ತಿಕ್ಕಲು ಪೋಲೀಸರು ನಡೆಸಿದ ಗೋಲಿಬಾರ್ನಲ್ಲಿ ಒಟ್ಟು 11 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ದೇಶದ ವಿವಿಧೆಡೆ ನಡೆದ ಹಿಂಸಾಚಾರ ಮತ್ತು ಪೋಲೀಸ್ ಗೋಲಿಬಾರ್ನಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿದೆ.
ಹಿಂಸಾಚಾರ ಮತ್ತು ನಂತರ ಪೋಲೀಸರು ನಡೆಸಿದ ಬಲಪ್ರಯೋಗದಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು , ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭುಗಿಲೆದ್ದಿರುವ ದ್ವೇಷಾಗ್ನಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಇಂದು ಕೂಡ ಬಿಹಾರ ಮತ್ತು ಕೇರಳಕ್ಕೆ ಗಲಭೆಯ ಕಿಚ್ಚು ವ್ಯಾಪಿಸಿದ್ದು, ಅಲ್ಲಿಯೂ ಅಹಿತಕರ ಘಟನೆಗಳು ನಡೆದ ವರದಿಗಳಿವೆ.
ನಿನ್ನೆ ಕೂಡ ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಿಂಸಾಚಾರ ಮುಂದುವರೆದಿದೆ. ಉತ್ತರಪ್ರದೇಶದಲ್ಲಿ ವ್ಯಾಪಕ ಗಲಭೆ ಮತ್ತು ಹಿಂಸಾಚಾರ ನಡೆದಿದೆ. ಪ್ರತಿಭಟನಾಕಾರರು ಮತ್ತು ಉದ್ರಿಕ್ತ ಗುಂಪನ್ನು ಚದುರಿಸಲು ಪೋಲೀಸರು ನಡೆಸಿರುವ ಗೋಲಿಬಾರ್ಗೆ 11 ಮಂದಿ ಸಾವನ್ನಪ್ಪಿದ್ದಾರೆ.
ಈ ಘಟನೆಯಲ್ಲಿ ಪೋಲೀಸರು ಸೇರಿದಂತೆ ಹಲವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಉತ್ತರಪ್ರದೇಶದ ಗೋರಖಪುರ, ಸಂಭಲ್, ಭದೋಹಿ, ಬಹ್ರೈಚ್, ಫರೂಖಾಬಾದ್, ಬುಲಂದಶಹರ್, ವಾರಣಾಸಿ, ಫಿರೋಜಾಬಾದ್, ಕಾನ್ಪುರ, ಬಿಜ್ನೋರ್, ಮೇರಠ್ ಹಾಗೂ ಇನ್ನೂ ಅನೇಕ ಜಿಲ್ಲೆಗಳಲ್ಲಿ ವ್ಯಾಪಕ ಗಲಭೆ ಮತ್ತು ಹಿಂಸಾಚಾರ ಭುಗಿಲೆದ್ದು ರಣರಂಗವಾಗಿ ಪರಿಣಮಿಸಿದೆ.
ಈ ಪೈಕಿ ಬಿಜ್ರ್ನೋ, ಕಾನ್ಪುರ, ಸಂಭಲ, ಫಿರೋಜಾಬಾದ್, ಮೇರಠ್ನಲ್ಲಿ ಸಂಭವಿಸಿದ ಗಲಭೆಗಳಲ್ಲಿ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ. ಬಿಜ್ನೋರ್ನಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಉಳಿದ ಕಡೆ ತಲಾ ಒಬ್ಬರು ಅಸು ನೀಗಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇವರಲ್ಲಿ 50 ಮಂದಿ ಪೋಲೀಸರೂ ಇದ್ದಾರೆ.
ಅನೇಕ ಕಡೆ ಕಲ್ಲು ತೂರಾಟ, ವಾಹನಗಳು ಹಾಗೂ ಆಸ್ತಿ-ಪಾಸ್ತಿಗಳಿಗೆ ಬೆಂಕಿ ಹಚ್ಚುವ ಘಟನೆಗಳು ನಡೆದಿವೆ. ಉದ್ರಿಕ್ತರನ್ನು ಚದುರಿಸಲು ಪೋಲೀಸರು ಲಾಠಿಪ್ರಹಾರ, ಅಶ್ರುವಾಯು ನಡೆಸಿದ್ದಾರೆ. ಗೊನೆಗೆ ಗೋಲಿರ್ಬಾ ಕೂಡ ಮಾಡಿದ್ದಾರೆ. ಉತ್ತರಪ್ರೇದಶದಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತಿದ್ದಂತೆಯೇ ರಾಜ್ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ವದಂತಿಯ ಮೂಲವಾಗಿರುವ ಇಂಟರ್ನೆಟ್ ಸೌಲಭ್ಯಗಳನ್ನೂ ಸ್ಥಗಿತಗೊಳಿಸಲಾಗಿದೆ.
ಅಕ್ಷರಶಃ ರಣರಂಗವಾದ ಉತ್ತರಪ್ರದೇಶದಲ್ಲಿ ಇಂದೂ ಕೂಡ ಉದ್ರಿಕ್ತ ಪರಿಸ್ಥಿತಿ ನೆಲೆಗೊಂಡಿದ್ದು , ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ. ಮತ್ತೆ ಯಾವುದೇ ರೀತಿಯ ಅಹಿತಕರ ಘಟನೆಗಳು ಮರು ಕಳಿಸದಂತೆ ತಡೆಯಲು ಕಟ್ಟೆಚ್ಚರ ವಹಿಸಿದ್ದು , ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.
ಕಳೆದ ವಾರದಿಂದ ಅಸ್ಸೋಂ ಸೇರಿದಂತೆ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ನವದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಭುಗಿಲೆದ್ದ ಹಿಂಸಾಚಾರ ಮತ್ತು ಗೋಲಿಬಾರ್ನಲ್ಲಿ ಈವರೆಗೆ 19 ಮಂದಿ ಮೃತಪಟ್ಟಿದ್ದಾರೆ.