ಅಕ್ರಮ ಮರುಳು ಗಣಿಗಾರಿಕೆ ತಡೆಗಟ್ಟಿವ ಹಿನ್ನಲೆ-ಶೀಘ್ರದಲ್ಲೇ ಹೊಸ ಕಾನೂನು ಜಾರಿಗೆ-ಸಚಿವ ಸಿ.ಸಿ.ಪಾಟೀಲ್

ಬೆಂಗಳೂರು, ಡಿ.21- ರಾಜ್ಯದಲ್ಲಿ ಮರಳು ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಹೊಸ ಕಾನೂನು ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಇಂದಿಲ್ಲಿ ತಿಳಿಸಿದರು.

ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿಯಾಗಿ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರಳು ಸಮಸ್ಯೆಯನ್ನು ಪರಿಹರಿಸಬೇಕೆಂಬ ಒತ್ತಡ ಕೇಳಿಬರುತ್ತಿದೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಿ ಹೊಸ ನೀತಿಯನ್ನು ಜಾರಿ ಮಾಡಲಾಗುವುದು ಎಂದು ಹೇಳಿದರು.

ಅಕ್ರಮ ಮರುಳು ಗಣಿಗಾರಿಕೆ ತಡೆಗಟ್ಟಲು ಬೇರೆ ರಾಜ್ಯಗಳಲ್ಲಿರುವ ಕಾನೂನುಗಳನ್ನು ಅಳವಡಿಸುವ ಕುರಿತಂತೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದ್ದಾರೆ. ಇದನ್ನು ರಾಜ್ಯದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಈಗಾಗಲೇ ಚರ್ಚೆ ಮಾಡಲಾಗಿದೆ. ಸದ್ಯದಲ್ಲೇ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಚರ್ಚಿಸಿ ನಂತರ ಹೊಸ ಕಾಯ್ದೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.

ತಮಿಳುನಾಡಿನಿಂದ ಈಗಲೂ ಅಕ್ರಮವಾಗಿ ಪ್ರತಿದಿನ ಮರಳು, ಗ್ರಾನೈಟ್ ಸೇರಿದಂತೆ ಮತ್ತಿತರ ವಸ್ತುಗಳು ರಾಜ್ಯಕ್ಕೆ ಪ್ರವೇಶ ಮಾಡುತ್ತಿವೆ. ಇದನ್ನು ತಡೆಗಟ್ಟಲು ನಮ್ಮ ಅಧಿಕಾರಿಗಳು ಪ್ರತಿದಿನ ನಿರಂತರವಾಗಿ ದಾಳಿ ನಡೆಸುತ್ತಲೇ ಇದ್ದಾರೆ.

ಕಾನೂನು ಬಾಹಿರವಾಗಿ ಅಕ್ರಮ ಮರಳು ದಂಧೆ ನಡೆಸುವವರ ವಿರುದ್ದ ಯಾವ ಶಿಕ್ಷೆ ವಿಧಿಸಬೇಕೆಂಬುದು ಹೊಸ ಕಾಯ್ದೆಯಲ್ಲಿರಲಿದೆ ಎಂದು ತಿಳಿಸಿದರು.

ಅಧಿಕಾರಿಗಳು ಬಿಗಿಯಾದ ಕ್ರಮ ಕೈಗೊಂಡಿದ್ದರೂ ರಾಜ್ಯದಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದೆ. ಈವರೆಗೂ 800 ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ. ಯಾರೇ ಆಗಲಿ ಇಂಥ ದಂಧೆಯಲ್ಲಿ ತೊಡಗಿದ್ದರೆ ಕ್ರಮ ಕೈಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಮಲೇಶಿಯ ಮರಳನ್ನು ಆಮದು ಮಾಡಿಕೊಳ್ಳಬೇಕೆ , ಅಲ್ಲಿಂದ ಖರೀದಿ ಮಾಡುವುದನ್ನು ನಿಲ್ಲಿಸಬೇಕೇ ಎಂಬುದರ ಕುರಿತು ಸಿಎಂ ಜೊತೆ ಸದ್ಯದಲ್ಲೇ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಕರಾವಳಿ ಭಾಗಕ್ಕೆ ಪ್ರತ್ಯೇಕವಾದ ಮರಳು ನೀತಿ ಜಾರಿ ಮಾಡಬೇಕೆಂಬ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ನಾನು ಅಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ಕರೆಯಲು ತೀರ್ಮಾನಿಸಿದ್ದೆ. ಆದರೆ ಕಳೆದ ಒಂದುವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಪ್ರಕ್ಷುಬ್ದವಾಗಿದೆ. ಹೀಗಾಗಿ ಅಲ್ಲಿಗೆ ಹೋಗಲು ಸಾದ್ಯವಾಗಿಲ್ಲ.

ಇನ್ನು 15 ದಿನದೊಳಗೆ ದಕ್ಷಿಣ ಕನ್ನಡಕ್ಕೆ ತೆರಳಿ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸುತ್ತೇನೆ. ಈಗಾಗಲೇ ಗುಜರಾತಿಗೂ ಭೇಟಿ ಕೊಟ್ಟು ಅಲ್ಲಿನ ನಿಯಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಅಧಿಕಾರಿಗಳು ಸಲಹೆ ಕೊಟ್ಟಿದ್ದಾರೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಎಲ್ಲರ ಅಭಿಪ್ರಾಯವನ್ನು ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ