ಬೆಂಗಳೂರು, ಡಿ.20-ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಸಚಿವರಾಗಲಿ, ಶಾಸಕರು ಮತ್ತು ಪಕ್ಷದ ಯಾವುದೇ ಮುಖಂಡರು ಪ್ರಚೋದನಾಕಾರಿ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿರುವುದರಿಂದ ಯಾರೊಬ್ಬರೂ ಅನಗತ್ಯವಾಗಿ ಗೊಂದಲ ಸೃಷ್ಟಿಸುವ, ಇಲ್ಲವೇ ಸಾರ್ವಜನಿಕರು ಪ್ರಚೋದನೆಗೊಳ್ಳುವಂತಹ ಹೇಳಿಕೆಗಳನ್ನು ನೀಡಬಾರದು. ಒಂದು ವೇಳೆ ಯಾರಾದರೂ ಶಿಸ್ತು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇನೆ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಸಂಬಂಧ ಪಕ್ಷದ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಜೊತೆ ಕೂಡ ಮಾತನಾಡಿರುವ ಯಡಿಯೂರಪ್ಪ ಸಂಬಂಧಪಟ್ಟವರನ್ನು ಹೊರತುಪಡಿಸಿ ಬೇರೆ ಯಾರೊಬ್ಬರೂ ಮಾತನಾಡಬಾರದು. ಮಾಧ್ಯಮಗಳ ಮುಂದೆ ಹೇಳಿಕೆ ಕೊಡುವಾಗ ಬಾಯಿಗೆ ಬಂದಂತೆ ಮಾತನಾಡದೆ ಎಚ್ಚರ ವಹಿಸಬೇಕು. ಪ್ರತಿಪಕ್ಷಗಳು ಪರಿಸ್ಥಿತಿ ಲಾಭ ಪಡೆಯಲು ಹವಣಿಸುತ್ತಿರುವುದರಿಂದ ಬಾಯಿಗೆ ಬೀಗ ಹಾಕಿಕೊಳ್ಳುವಂತೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುವ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಯುವಕರು ಪೋಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇನ್ನೂ ಕೆಲವು ಕಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂತಿದೆ. ಆಡಳಿತ ಪಕ್ಷದಲ್ಲಿರುವ ನಾವು ಶಾಂತಿ ಕಾಪಾಡಿಕೊಳ್ಳಬೇಕು. ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡಿದರೆ ಸಾರ್ವಜನಿಕರು ಉದ್ವೇಗಕ್ಕೊಳಗಾಗುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಸಂಯಮದಿಂದ ವರ್ತಿಸಬೇಕೆಂದು ಶಾಸಕರು ಮತ್ತು ಸಚಿವರಿಗೆ ಸಿಎಂ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರತಿಭಟನೆಯಲ್ಲಿ ಬೇರೆ ಬೇರೆ ರಾಜ್ಯಗಳ ಕೆಲವು ಸಂಘಟನೆಗಳ ಯುವಕರು ಭಾಗವಹಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳುಗೆಡವಿ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಹೀಗಾಗಿ ಸಚಿವರು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕೆಂದು ಯಡಿಯೂರಪ್ಪ ಸಲಹೆ ಮಾಡಿದ್ದಾರೆ.
ನಿಮ್ಮ ಒಂದೊಂದು ಹೇಳಿಕೆಗಳು ಸಾರ್ವಜನಿಕರ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಪ್ರತಿಪಕ್ಷದವರು ಉದ್ದೇಶಪೂರ್ವಕವಾಗಿಯೇ ಪ್ರಚೋದನಕಾರಿ ಹೇಳಿಕೆ ಕೊಡುತ್ತಾರೆ. ನೀವು ಕೆಲ ದಿನಗಳ ಮಟ್ಟಿಗೆ ಮೌನದಿಂದಲೇ ಎಲ್ಲವನ್ನು ಆಲಿಸಬೇಕು. ಸಂಬಂಧಪಟ್ಟವರು ಮಾತ್ರ ಈ ಬಗ್ಗೆ ಹೇಳಿಕೆಗಳನ್ನು ಕೊಡುತ್ತಾರೆ.
ಪ್ರತಿಯೊಬ್ಬರೂ ಮಾತನಾಡುವ ಅಗತ್ಯವಿಲ್ಲ ಎಂದು ಯಡಿಯೂರಪ್ಪ ಹೇಳಿರುವುದಾಗಿ ತಿಳಿದುಬಂದಿದೆ.
ವಿಶೇಷವಾಗಿ ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್, ಶಾಸಕರಾದ ಸುನೀಲ್ಕುಮಾರ್ ಸೇರಿದಂತೆ ಹಲವರಿಗೆ ಈಗಾಗಲೇ ಯಡಿಯೂರಪ್ಪ ಸ್ಪಷ್ಟ ಸೂಚನೆ ಕೊಟ್ಟಿದ್ದು, ಅನಗತ್ಯವಾಗಿ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಿದ್ದಾರೆ.
ಸಚಿವರಿಗೆ ಸೂಚನೆ:
ಪ್ರಕ್ಷುಬ್ಧ ಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ವಿವಿಧ ಮುಖಂಡರ ಜೊತೆ ಶಾಂತಿ, ಸಂಧಾನ ಸಭೆ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾಶ್ರೀನಿವಾಸ್ ಪೂಜಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.
ತಕ್ಷಣವೇ ನೀವು ಮಂಗಳೂರಿಗೆ ತೆರಳಿ ಅಲ್ಲಿನ ಪರಿಸ್ಥಿತಿಯ ಪರಾಮರ್ಶೆ ನಡೆಸಬೇಕು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ನಗರ ಪೋಲೀಸ್ ಆಯುಕ್ತರು, ವಿವಿಧ ಧಾರ್ಮಿಕ ಸಂಘಟನೆಗಳು ಮುಖಂಡರು, ಸಂಘ ಸಂಸ್ಥೆಗಳು ಸೇರಿದಂತೆ ಮತ್ತಿತರ ಜೊತೆ ಸಭೆ ನಡೆಸಿ ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡಬೇಕು. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕುರಿತಂತೆ ನನಗೆ ಪ್ರತಿಕ್ಷಣವೂ ಮಾಹಿತಿನೀಡಬೇಕು ಎಂದು ಬಿಎಸ್ವೈ ಪೂಜಾರಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಸಚಿವರ ಜೊತೆಗೆ ಜಿಲ್ಲೆಯ ಶಾಸಕರು ಕೂಡ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಮುಂದಾಗಬೇಕು. ಧಾರ್ಮಿಕ ಮುಖಂಡರು ಹಾಗೂ ಸಂಘಟನೆಗಳ ಜೊತೆ ನಿರಂತರವಾಗಿ ಸಭೆಗಳನ್ನು ನಡೆಸಿ ಕಾಯ್ದೆ ಬಗ್ಗೆ ಮನವರಿಕೆ ಮಾಡಿ. ಈ ಕಾಯ್ದೆ ಜಾರಿಯಿಂದ ಯಾರೊಬ್ಬರಿಗೂ ತೊಂದರೆಯಾಗುವುದಿಲ್ಲ ಎಂಬುದನ್ನು ತಿಳಿಹೇಳಬೇಕು. ಪ್ರತಿಪಕ್ಷಗಳು ಅನಗತ್ಯವಾಗಿ ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದನ್ನು ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ಮಾಡಿದ್ದಾರೆ.