ಮಹಾಭಿಯೋಗಕ್ಕೆ ಗುರಿಯಾದ 3ನೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಡಿ.19- ಅಮೆರಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾಭಿಯೋಗ (ಇಂಪಿಚ್‍ಮೆಂಟ್) ಕೊನೆಗೂ ಜಾರಿಗೆ ಬಂದಿದೆ.

ಅಧಿಕಾರ ದುರುಪಯೋಗ ಮತ್ತು ಕರ್ತವ್ಯ ಲೋಪವೆಸಗಿದ ಆರೋಪಗಳ ಸಂಬಂಧ ಟ್ರಂಪ್ ಅವರನ್ನು ಅಮೆರಿಕದ ಸಂಸತ್ತಿನ ಕೆಳಮನೆಯಾದ ಹಾಗೂ ಡೆಮಾಕ್ರಟ್ ಬಹುಮತವಿರುವ ಹೌಸ್ ಆಫ್ ರೆಪ್ರೆಸೆಂಟೇಟಿವ್ (ಜನಪ್ರತಿನಿಧಿ ಸಭೆ) ನಿನ್ನೆ ವಾಗ್ದಂಡನೆಗೆ ಗುರಿಪಡಿಸಲಾಗಿದೆ. ಆದರೆ ಈ ಬೆಳವಣಿಗೆಯಿಂದ ರಾಷ್ಟ್ರಾಧ್ಯಕ್ಷರ ಪದಚ್ಯುತಿಗೆ ಆಸ್ಪದವಾಗುವುದಿಲ್ಲ.

ಈ ಮೂಲಕ ಮಹಾಭಿಯೋಗಕ್ಕೆ ಗುರಿಯಾದ 3ನೆ ಅಧ್ಯಕ್ಷ ಎಂಬ ಅಪಖ್ಯಾತಿಗೆ ಡೊನಾಲ್ಡ್ ಟ್ರಂಪ್ ಗುರಿಯಾಗಿದ್ದಾರೆ.

ಮುಂದಿನ ತಿಂಗಳು ಸಂಸತ್ತಿನ ಮೇಲ್ಮನೆಯಾದ ಸೆನಟ್‍ನಲ್ಲಿ ವಾಗ್ದಂಡನೆ ಪ್ರಕ್ರಿಯೆಯ ಮೇಲೆ ಮತದಾನ ನಡೆಯಲಿದೆ. ಆದರೆ ಸೆನೆಟ್‍ನಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕ್ ಪಕ್ಷ ಬಹುಮತ ಹೊಂದಿರುವ ಕಾರಣದಿಂದ ವಾಗ್ದಂಡನೆ ಪ್ರಕ್ರಿಯೆಗೆ ಸೋಲಾಗುವ ಸಾಧ್ಯತೆಗಳಿವೆ.

ಟ್ರಂಪ್ ಆಕ್ರೋಶ: ಸಂಸತ್ತಿನ ಕೆಳಮನೆಯಲ್ಲಿ ಟ್ರಂಪ್ ವಾಗ್ದಂಡನೆಗೆ ಗುರಿಯಾಗಿದ್ದರೂ ಅವರ ಅಧ್ಯಕ್ಷ ಹುದ್ದೆಗೆ ಯಾವುದೇ ಆತಂಕವಿಲ್ಲ.

ಇದೇ ವೇಳೆ ಹೌಸ್ ಆಫ್ ರೆಪ್ರೆಸೆಂಟೇಟಿವ್ ತಮ್ಮನ್ನು ವಾಗ್ದಂಡನೆ ಪ್ರಕ್ರಿಯೆ ಗುರಿಪಡಿಸಿದ್ದಕ್ಕೆ ಟ್ರಂಪ್ ಸರಣಿ ಟ್ವೀಟ್ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಅವರಿಗೆ ವಾಗ್ದಂಡನೆ ವಿಧಿಸುವ ಕುರಿತಂತೆ ಹೌಸ್ ಆಫ್ ರೆಪ್ರೆಸೆಂಟೇಟಿವ್‍ನಲ್ಲಿ ನಿನ್ನೆ ಸುಮಾರು 6 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಯಿತು. ಬಳಿಕ ವಾಗ್ದಂಡನೆಯನ್ನು ಮತಕ್ಕೆ ಹಾಕಲಾಯಿತು. 435 ಸದಸ್ಯರ ಹೌಸ್ ಆಫ್ ರೆಪ್ರೆಸೆಂಟೇಟಿವ್‍ಗೆ ಪ್ರತಿನಿಧಿಗಳ ಸದನ ವಾಗ್ದಂಡನೆ ಪ್ರಕ್ರಿಯೆ ಪಾಸಾಗಲು 216 ಮತಗಳ ಅಗತ್ಯವಿದ್ದು, ಈ ಸದನದಲ್ಲಿ ವಿಪಕ್ಷವಾದ ಡೆಮಾಕ್ರಿಟ್ ಪಕ್ಷದ 232 ಸದಸ್ಯರಿದ್ದಾರೆ.

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಬಹುದಾದ ಜೋ ಬಿಡೆನ್ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಮಾಹಿತಿಯನ್ನು ಬಹಿರಂಗಪಡಿಸುವಂತೆ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವ್ಲಾದಿರ್ಮಿ ಝೆಲೆನ್ಸ್ಕಿ ಅವರ ಮೇಲೆ ಒತ್ತರ ಹೇರುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಇದಕ್ಕಾಗಿ ಅಮೆರಿಕಾದಿಂದ ಉಕ್ರೇನ್ ಸೇನಾ ಕಾರ್ಯಾಚರಣೆಗಾಗಿ ಬಿಡುಗಡೆಯಾದ 400 ಮಿಲಿಯನ್ ಡಾಲರ್ ಅನ್ನು ಟ್ರಂಪ್ ತಡೆ ಹಿಡಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ