ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಆವರಣದೊಳಗೆ ಭಾನುವಾರ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಪ್ರಕರಣದ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಶಾಂತಿಯುತ ವಾತಾರಣದಲ್ಲಿ ಈ ವಿಚಾರ ನಿರ್ಧರಿಸುವುದಾಗಿ ನ್ಯಾಯಾಲಯ ಹೇಳಿದೆ.
ನ್ಯಾಯಾಲಯ ಹೆಚ್ಚಿನದನ್ನು ಮಾಡುತ್ತದೆ ಎಂದು ನಾನು ಯೋಚಿಸುವುದಿಲ್ಲ ಎಂದು ಹೇಳಿದ ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಇದು ಕಾನೂನು ಸವ್ಯವಸ್ಥೆ ವಿಚಾರ. ಇದನ್ನು ಪೊಲೀಸರು ನಿರ್ವಹಿಸುತ್ತಾರೆ ಎಂದು ಹೇಳಿದರು.
ಸೋಮವಾರ ಯಾವುದೇ ಹಿಂಸಾಚಾರ ನಡೆಯದಿದ್ದರೆ ಈ ಪ್ರಕರಣದ ವಿಚಾರವಣೆಯನ್ನು ಮಂಗಳವಾರ ನಡೆಸುತ್ತೇವೆ. ಪರಿಸ್ಥಿತಿ ಶಾಂತವಾಗಲಿ. ನಾವು ಏನು ಮಾಡಬಹುದು ಎಂದು ಯೋಚಿಸುತ್ತೇವೆ. ಒಂದು ವೇಳೆ ಪ್ರತಿಭಟನೆ ನಡೆದರೆ ಮತ್ತು ಸಾರ್ವಜನಿಕರ ಆಸ್ತಿ ಹಾನಿ ಮುಂದುವರೆದರೆ ನಾವು ವಿಚಾರಣೆ ನಡೆಸುವುದಿಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದರು.
ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ಕೈಯಲ್ಲಿ ಇದೆಯೇ ಎಂದು ವಿದ್ಯಾರ್ಥಿಗಳನ್ನು ಸಿಜೆಐ ತರಾಟೆಗೆ ತೆಗೆದುಕೊಂಡರು. ಅವರು ರಸ್ತೆಗೆ ತೆಗೆದುಕೊಂಡು ಹೋಗುವುದಾದರೆ, ಹೋಗಲಿ. ಆದರೆ, ಆನಂತರ ಆ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಭಾನುವಾರ ರಾತ್ರಿ ಪ್ರತಿಭಟನೆ ಹಿಸಾಂಚಾರಕ್ಕೆ ತಿರುಗಿದ್ದು, ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿತ್ತು. ಪ್ರತಿಭಟನೆ ಸಂಬಂಧ 50 ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು, ಇಂದು ಬಿಡುಗಡೆ ಮಾಡಲಾಗಿದೆ.