ಮುಖ್ಯಮಂತ್ರಿಗಳನ್ನು ಭೇಟಿಯಾದ ನೂತನ ಶಾಸಕರು

ಬೆಂಗಳೂರು, ಡಿ.11-ಉಪಚುನಾವಣೆಯಲ್ಲಿ ಗೆದ್ದ ಹಾಗೂ ಪರಾಭವಗೊಂಡವರೆಲ್ಲರೂ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಆಗಮಿಸಿದ ನೂತನ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿ ಎಚ್.ವಿಶ್ವನಾಥ್, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.

ಮುಖ್ಯವಾಗಿ ಸೋಮವಾರ ನಡೆಸಲು ಉದ್ದೇಶಿಸಿರುವ ಸಚಿವ ಸಂಪುಟ ವಿಸ್ತರಣೆ ವೇಳೆ 11 ಶಾಸಕರ ಜೊತೆ ಉಪಚುನಾವಣೆಯಲ್ಲಿ ಪರಾಭವಗೊಂಡಿರುವ ಎಂ.ಟಿ.ಬಿ.ನಾಗರಾಜ್ ಮತ್ತು ಎಚ್.ವಿಶ್ವನಾಥ್‍ಗೆ ಸ್ಥಾನ ಕಲ್ಪಿಸಬೇಕೆಂದು ಸಿಎಂಗೆ ಮನವಿ ಮಾಡಿದ್ದಾರೆ.

ಯಾವುದೇ ಕಾರಣಕ್ಕೂ ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್‍ಗೆ ಅನ್ಯಾಯವಾಗಬಾರದು. ಶಾಸಕ ಸ್ಥಾನಕ್ಕೆ ಅವರೆಲ್ಲರೂ ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದಾರೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕೆಂದು ಬಿಎಸ್‍ವೈ ಅವರಲ್ಲಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿರುವ ಯಡಿಯೂರಪ್ಪ, ನಾನು ಕೊಟ್ಟ ವಾಗ್ದಾನದಂತೆ ಮೊದಲು 11 ಸಚಿವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು. ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಲಾಗುವುದು. ಆರ್.ಶಂಕರ್ ಅವರನ್ನೂ ಪರಿಷತ್‍ಗೆ ನೇಮಕ ಮಾಡಲು ತಕ್ಷಣವೇ ಸಾಧ್ಯವಿಲ್ಲ. ಒಂದು ಸ್ಥಾನ ತೆರವಾದ ನಂತರ ಅವರಿಗೆ ಸ್ಥಾನ ಕಲ್ಪಿಸುವ ಭರವಸೆ ಕೊಟ್ಟಿದ್ದಾರೆ.

ದೂರು ವಾಪಸ್ ತೆಗೆಸಿ:
ಇದೇ ವೇಳೆ ನೂತನ ಶಾಸಕರು ಮುಖ್ಯಮಂತ್ರಿ ರಾಜರಾಜೇಶ್ವರಿ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಸಂಬಂಧ ನ್ಯಾಯಾಲಯದಲ್ಲಿ ದಾಖಲಾಗಿರುವ ಅರ್ಜಿಗಳನ್ನು ಹಿಂಪಡೆಯುವಂತೆ ದೂರುದಾರರಿಗೆ ಸೂಚಿಸಬೇಕೆಂದು ಮನವಿ ಮಾಡಿದರು.

ಆರ್.ಆರ್.ನಗರದಲ್ಲಿ ಮುನಿರತ್ನ ವಿರುದ್ಧ ಬಿಜೆಪಿ ಅಭ್ಯರ್ಥಿ ತುಳಸಿಮುನಿರಾಜು ಗೌಡ, ಮಸ್ಕಿಯಲ್ಲಿ ಪ್ರತಾಪ್‍ಗೌಡ ಪಾಟೀಲ್ ಪರಾಭವಗೊಂಡ ಬಸವರಾಜ ತುರುವಿಹಾಳ ಹೈಕೋರ್ಟ್‍ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಇತ್ಯರ್ಥವಾಗದ ಕಾರಣ ಉಪಚುನಾವಣೆ ವಿಳಂಬವಾಗಿದೆ.

15 ಕ್ಷೇತ್ರಗಳ ಚುನಾವಣೆ ಜೊತೆಗೆ ಈ ಎರಡೂ ಕ್ಷೇತ್ರಗಳ ಚುನಾವಣೆ ನಡೆದಿದ್ದರೆ ಮುನಿರತ್ನ ಮತ್ತು ಪ್ರತಾಪ್‍ಗೌಡ ಪಾಟೀಲ್ ಇಬ್ಬರೂ ಗೆಲ್ಲುತ್ತಿದ್ದರು. ಕೂಡಲೇ ದೂರುದಾರರಿಗೆ ಅರ್ಜಿಯನ್ನು ಹಿಂಪಡೆಯಲು ಸೂಚಿಸಬೇಕೆಂದು ಕೋರಿದರು.

ಈ ಸಂಬಂಧ ಮುನಿರತ್ನ ಮತ್ತು ಬಸವರಾಜ ತುರುವಿಹಾಳ್ ಜೊತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವ ಭರವಸೆ ಕೊಟ್ಟಿದ್ದಾರೆ.

ಇದೇ ವೇಳೆ ನೂತನ ಶಾಸಕರು ಸಂಪುಟದಲ್ಲಿ ತಮಗೆ ಪ್ರಮುಖ ಖಾತೆಗಳು ಮತ್ತು ಜಿಲ್ಲಾ ಉಸ್ತುವಾರಿ ನೀಡುವಂತೆ ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.

ಶಾಸಕರಾದ ರಮೇಶ್ ಜಾರಕಿ ಹೊಳಿ, ಬಿ.ಸಿ.ಪಾಟೀಲ್, ಎಸ್.ಟಿ.ಸೋಮಶೇಖರ್, ಭೆರತಿ ಬಸವರಾಜ್, ಕೆ.ಗೋಪಾಲಯ್ಯ, ಮಾಜಿ ಶಾಸಕರಾದ ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್, ಮುನಿರತ್ನ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ