ಪೌರತ್ವ (ತಿದ್ದುಪಡಿ) ಮಸೂದೆಯ ಪರವಾಗಿ ಮತ ಚಲಾಯಿಸಿದ ಶಿವಸೇನೆ

ನವದೆಹಲಿ,ಡಿ.10-ಕೇಂದ್ರದಲ್ಲಿ ಆಡಳಿತಾರೂಢ ಎನ್‍ಡಿಎ ಕೂಟದಿಂದ ಹೊರನಡೆದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‍ಸಿಪಿ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿರುವ ಶಿವಸೇನೆಯ 18 ಸಂಸದರು ಸೋಮವಾರ ಲೋಕಸಭೆಯಲ್ಲಿ ಪೌರತ್ವ (ತಿದ್ದುಪಡಿ) ಮಸೂದೆಯ ಪರವಾಗಿ ಮತ ಚಲಾಯಿಸಿದರು.

ಮಸೂದೆ ಬಗೆಗಿನ ಚರ್ಚೆ ವೇಳೆ ಮಾತನಾಡಿದ ಪಕ್ಷದ ಸಂಸದರು, ಸಿಎಬಿ ಅನ್ವಯ ಪೌರತ್ವ ಪಡೆಯುವ ನಿರಾಶ್ರಿತರಿಗೆ 25 ವರ್ಷಗಳ ಕಾಲ ಮತದಾನದ ಹಕ್ಕು ನೀಡಬಾರದು ಎಂದು ಒತ್ತಾಯಿಸಿದರು. ಈಶಾನ್ಯ ರಾಜ್ಯಗಳನ್ನು ಸಿಎಬಿ ಹೊರತುಪಡಿಸಿರುವ ಹಿನ್ನೆಲೆಯಲ್ಲಿ ಪೌರತ್ವ ಪಡೆದ ನಿರಾಶ್ರಿತರು ಯಾವ ರಾಜ್ಯಗಳಲ್ಲಿ ನೆಲೆ ನಿಲ್ಲುತ್ತಾರೆ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಶಿವಸೇನೆಯ ವಿನಾಯಕ್ ರಾವುತ್ ಮಸೂದೆಯನ್ನು ಬೆಂಬಲಿಸಿದರೂ, ನಿರಾಶ್ರಿತರನ್ನು ಸ್ವೀಕರಿಸುವುದರಿಂದ ಉಂಟಾಗುವ ಹೊರೆಯನ್ನು ಲೆಕ್ಕಾಚಾರ ಮಾಡಬೇಕು ಎಂದು ಸಲಹೆ ಮಾಡಿದರು. ಶಿವಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆ ಸದಾ ಅಕ್ರಮ ವಲಸಿಗರನ್ನು ಹೊರಹಾಕಬೇಕು ಹಾಗೂ ಮಣ್ಣಿನ ಮಕ್ಕಳಿಗೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸುತ್ತಾ ಬಂದಿದ್ದನ್ನು ಉಲ್ಲೇಖಿಸಿದರು.

ಕೇವಲ ಕಾನೂನು ಮಾಡಿದರೆ ಸಾಲದು ಎಂದು ಸರ್ಕಾರವನ್ನು ಚುಚ್ಚಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಬಳಿಕ ಬೇರೆ ರಾಜ್ಯಗಳ ಎಷ್ಟು ಮಂದಿ ಅಲ್ಲಿಗೆ ಹೋಗಿ ವಹಿವಾಟು ಆರಂಭಿಸಿದ್ದಾರೆ ಎನ್ನುವುದನ್ನು ಸರ್ಕಾರ ದೇಶಕ್ಕೆ ತಿಳಿಸಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ