ವಾಷಿಂಗ್ಟನ್,ಡಿ.10- ಪೌರತ್ವ (ತಿದ್ದುಪಡಿ) ಮಸೂದೆ ಅನುಮೋದನೆಯು “ತಪ್ಪು ದಿಕ್ಕಿನಲ್ಲಿ ಅಪಾಯಕಾರಿ ತಿರುವು” ಎಂದು ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಅಮೆರಿಕದ ಫೆಡರಲ್ಕಮಿಷನ್ ಹೇಳಿದೆ.
ಸಂಸತ್ತಿನ ಉಭಯ ಸದನಗಳಲ್ಲಿ ತಿದ್ದುಪಡಿ ಮಸೂದೆ ಅಂಗೀಕರಿಸಿದರೆ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಪ್ರಮುಖ ನಾಯಕತ್ವದ ವಿರುದ್ಧ ಅಮೆರಿಕ ಸರ್ಕಾರ ನಿರ್ಬಂಧಗಳನ್ನು ವಿಧಿಸಬೇಕು ಎಂದು ಆಯೋಗ ಹೇಳಿದೆ.
ಪ್ರಸ್ತಾವಿತ ತಿದ್ದುಪಡಿ ವಿಧೇಯಕದ ಪ್ರಕಾರ, 2014ರ ಡಿಸೆಂಬರ್ 31ರೊಳಗೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಬಂದು ನೆಲೆಸಿರುವ ಹಿಂದು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸಮುದಾಯದ ನಿರಾಶ್ರಿತರಿಗೆ ಕಾಯಂ ಪೌರತ್ವ ನೀಡುವುದು ವಿಧೇಯಕದ ನಿಲುವಾಗಿದೆ. ಅವರನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ಕಮಿಷನ್ (ಯುಎಸ್ ಸಿಐಆರ್ ಎಫ್) ಸೋಮವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ, ಲೋಕಸಭೆಯಲ್ಲಿ ಈ ವಿಧೇಯಕ ಅಂಗೀಕಾರವಾಗಿರುವುದು ತೀವ್ರ ಸಮಸ್ಯೆಗೆ ಕಾರಣವಾಗಲಿದೆ ಎಂದು ತಿಳಿಸಿದೆ.