ಬೆಂಗಳೂರು: ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ಪಕ್ಷದ ಮುಂದಾಳುಗಳಾದ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರನ್ನು ಹಣಿಯಲು ಕಾದು ಕುಳುತಿದ್ದ ಪಕ್ಷದಲ್ಲಿನ ಅವರ ವಿರೋಧಿ ಬಣಕ್ಕೆ ಅಯಾಚಿತ ಅವಕಾಶವೊಂದನ್ನು ಒದಗಿಸಿಕೊಟ್ಟಂತಾಗಿದೆ.
ಉಪಚುನಾವಣೆಯಲ್ಲಿನ ಪ್ರದರ್ಶನವನ್ನೇ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಿರುವರಾಜ್ಯ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರ ವಿರೋಧಿ ಬಣ ದೆಹಲಿಯಲ್ಲಿ ಇದೀಗ ದಿಢೀರ್ ಸಕ್ರಿಯವಾಗಿದ್ದು, ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸುವಂತೆ ಒತ್ತಾಯಿಸಿದೆ.
ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ರಾಜ್ಯಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಜಿ.ಸಿ.ಚಂದ್ರಶೇಖರ್, ನಾಸಿರ್ ಹುಸೇನ್ ಹಾಗೂ ಸಂಸದ ಡಿಕೆ. ಸುರೇಶ್ ಅವರು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಿನ್ನೆ ಸುಧೀರ್ಘ ಸಭೆ ನಡೆಸಿದ್ದಾರೆ.
ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷ ಮತ್ತು ವಿರೋಧ ಪಕ್ಷದ ನಾಯಕತ್ವಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಹಾಗೆಯೇ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು, ಎಐಸಿಸಿ ಅಧ್ಯಕ್ಷರ ಅಂಗೀಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರಗಳನ್ನು ಅಂಗೀಕರಿಸುವಂತೆ ಹೈಕಮಾಂಡ್ ಮುಂದೆ ಲಾಬಿ ಮಾಡುವುದೇ ಸಿದ್ದರಾಮಯ್ಯ ವಿರೋಧಿ ಬಣದ ಮೊದಲ ಕಾರ್ಯಸೂಚಿಯಾಗಿದೆ.
ಈ ರಾಜೀನಾಮಮೆ ಅಂಗೀಕರಿಸುವ ಅಗತ್ಯವನ್ನು ಹೈಕಮಾಂಡ್’ಗೆ ಮನದಟ್ಟು ಮಾಡಿಕೊಟ್ಟರೆ ಉಳಿದಂತೆ ತಮ್ಮ ಮುಂದಿನ ಕಾರ್ಯತಂತ್ರದ ಕಿಟಕಿ,ಬಾಗಿಲುಗಳು ತೆರೆದುಕೊಳ್ಳಲಿದೆ ಎಂಬುದು ಈ ಬಣದ ನಂಬಿಕೆ. ಸದ್ಯ ಕಾಂಗ್ರೆಸ್ ಪಕ್ಷದ ಮುಂಚೂಣಿ ಜೋಡೆತ್ತುಗಳಾಗಿರುವ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ನಾಯಕತ್ವವು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಅವನತಿಯಂಚಿಗೆ ತಂದು ನಿಲ್ಲಿಸಿದೆ.
ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಾಜೀನಾಮೆ ಅಂಗೀಕಾರವಾಗಿದ್ದೇ ಆದರೆ, ಮಾಜಿ ಸಚಿವ ಡಿಕೆ.ಶಿವಕುಮಾರ್ ಮತ್ತು ಹೆಚ್.ಕೆ.ಪಾಟೀಲ್ ಈ ಹುದ್ದೆಗಳಿಗೆ ಬರಬಹುದು. ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಕೆಪಿಪಿಸಿ ಅಧ್ಯಕ್ಷರಾದರೂ ಪರವಾಗಿಲ್ಲ ಎಂಬುದು ಈ ಗುಂಪಿನ ನಿಲುವಾಗಿದೆ. ಆದರೆ, ಖರ್ಗೆ ಹೈಕಮಾಂಡ್ ಮಟ್ಟದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದರೂ ರಾಜ್ಯದ ವಾಸ್ತವ ಚಿತ್ರಣವನ್ನು ಹೈಕಮಾಂಡ್ ಮುಂದೆ ಇಡುತ್ತಿಲ್ಲ. ರಾಜ್ಯ ಕಾಂಗ್ರೆಸ್ ಹೊಣೆ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾರ್ ಅವರೂ ಪಕ್ಷಾಪಾತಿಯಾಗಿದ್ದಾರೆಂಬ ಬೇಸರ ಈ ನಾಯಕರಿಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕನ ಸ್ಥಾನ, ಶಾಸಕಾಂಗದ ಪಕ್ಷದ ನಾಯಕ ಸ್ಥಾನ, ಉಭಯ ಸದನಗಳ ಉಪ ನಾಯಕ ಸ್ಥಾನ ಮತ್ತು ಉಭಯ ಸದನಗಳಲ್ಲಿನ ಮುಖ್ಯ ಸಚೇತಕ ಹುದ್ದೆಗಳು ಸಿದ್ದರಾಮಯ್ಯ ಹಾಗೂ ಅವರ ತಂಡದ ಕೈ ತಪ್ಪಬೇಕೆಂಬುದು ಈ ಬಣದ ಪ್ರಯತ್ನವಾಗಿದೆ.