ಲಕ್ನೋ, ಡಿ.9- ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೆ ಆರೋಪಿಗಳೇ ಬೆಂಕಿ ಹಚ್ಚಿ ಕೊಂದ ಘಟನೆ ಸಂಬಂಧ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ 7 ಪೋಲೀಸರನ್ನು ಅಮಾನತುಗೊಳಿಸಲಾಗಿದೆ.
ಸಂತ್ರಸ್ತೆಗೆ ರಕ್ಷಣೆ ಕೊಡಲು ಕರ್ತವ್ಯ ಲೋಪ ತೋರಿದ ಆರೋಪದ ಮೇಲೆ ಉತ್ತರ ಪ್ರದೇಶ ಸರ್ಕಾರ ಈ ಏಳು ಪೋಲೀಸರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.
ಕರ್ತವ್ಯ ಲೋಪ ತೋರಿದ್ದಕ್ಕೆ ಉನ್ನಾವೋನ ಬಿಹಾರ ಪೋಲೀಸ್ ಠಾಣಾಧಿಕಾರಿ ಅಜಯ್ಕುಮಾರ್ ತ್ರಿಪಾಠಿ ಹಾಗೂ ಇತರ ಆರು ಪೋಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಾಸ್ತಿ ತಿಳಿಸಿದ್ದಾರೆ.
23 ವರ್ಷದ ರೇಪ್ ಸಂತ್ರಸ್ತೆಯು ನ್ಯಾಯಾಲಯಕ್ಕೆ ಹೋಗಿ ಬರುವಾಗ ಐದು ಜನರು ಹಲ್ಲೆ ಎಸಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಬೆಂಕಿ ಜ್ವಾಲೆ ಮೈ ಸುಡುತ್ತಿರುವಂತೆಯೇ ಆಕೆ ಒಂದು ಕಿಲೋ ಮೀಟರ್ವರೆಗೂ ಹೋಗಿ ಪೋಲೀಸರ ಸಹಾಯ ಪಡೆದಿದ್ದಳು.
ಆದರೆ, ಬದುಕಲು ಬಹಳ ಕಷ್ಟಪಟ್ಟ ಆ ಮಹಿಳೆ ಜೀವನ್ಮರಣ ಹೋರಾಟದಲ್ಲಿ ಸಾವನ್ನಪ್ಪಿದರು. ಆಕೆಯ ದೇಹದ ಶೇ. 90 ಭಾಗ ಸುಟ್ಟು ಹೋಗಿತ್ತು.
ಶುಕ್ರವಾರ ತಡರಾತ್ರಿ ಮೃತಪಟ್ಟ ಉನ್ನಾವೋ ಸಂತ್ರಸ್ತೆ ಅಂತ್ಯಕ್ರಿಯೆ ನಿನ್ನೆ ಭಾರೀ ಪೋಲೀಸ್ ಬಂದೋಬಸ್ತ್ ನಡುವೆ ನೆರವೇರಿತು.