ವಾಷಿಂಗ್ಟನ್: ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಪತ್ತೆ ಹಚ್ಚಿದೆ. ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳದ ಫೋಟೋವನ್ನು ನಾಸಾ ಹಂಚಿಕೊಂಡಿದೆ.
ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್ಆರ್ಒ) ಮೂಲಕ ತೆಗೆದ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದು ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನು ಪತ್ತೆಮಾಡಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹರಡಿಕೊಂಡಿವೆ ಎಂದು ತಿಳಿಸಿದೆ.
ಸೆ. 26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಶಣ್ಮುಗ ಸುಬ್ರಮಣ್ಯಂ ಎಂಬ ವ್ಯಕ್ತಿ ಎಲ್ಆರ್ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಮೀ. ದೂರದಲ್ಲಿ ಅದರ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿದೆ.
3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಸೆಪ್ಟೆಂಬರ್ 7ರ ಬೆಳಗಿನ ಜಾವ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.