ಮಹಾರಾಷ್ಟ್ರ: ವಿಧಾನಸಭೆ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧ ಆಯ್ಕೆ 

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಕಾಂಗ್ರೆಸ್ ಮುಖಂಡ ನಾನಾ ಪಟೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್  ಪಕ್ಷದ ನಾನಾ ಪಟೋಲೆ ಜೊತೆಗೆ ಬಿಜೆಪಿಯ ಶಾಸಕ ಕಿಷನ್ ಎಸ್ ಕಥೋರೆ ಕೂಡಾ ಸ್ಪೀಕರ್ ಹುದ್ದೆಯ ಆಕಾಂಕ್ಷಿಯಾಗಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ನಾನಾ ಪಟೋಲೆ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಪಟೋಲೆ ವಿದರ್ಭ ಜಿಲ್ಲೆಯ ಸಕೋಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಪಕ್ಷದ ಹಿರಿಯ ಧುರೀಣರಾಗಿದ್ದಾರೆ.

ಸ್ಪೀಕರ್ ನ್ನು ಅವಿರೋಧವಾಗಿ ಆಯ್ಕೆ ಮಾಡಬೇಕೆಂದು ಸರ್ವಪಕ್ಷ ಸಭೆ ಹಾಗೂ ಇತರ ಪಕ್ಷಗಳ ಕೋರಿಕೆ ಹಿನ್ನೆಲೆಯಲ್ಲಿ ಬಿಜೆಪಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸದನದಲ್ಲಿ ಹೇಳಿದರು.

ನಾನಾ ಪಟೋಲೆ ಕೃಷಿಕ ಕುಟುಂಬದಿಂದ ಬಂದವರಾಗಿದ್ದು, ಅವರು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುತ್ತಾರೆ ಎಂಬ ಭರವಸೆ ಹೊಂದಿರುವುದಾಗಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ  ಅಭಿನಂದನಾ ಭಾಷಣ ಮಾಡಿದರು.

56 ವರ್ಷದ ನಾನಾ ಪಟೋಲೆ ಓಬಿಸಿ ಕುಣಬಿ ಸಮುದಾಯಕ್ಕೆ ಸೇರಿದ್ದು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಹೊರಬಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ