ಹೈದರಾಬಾದ್: ತೆಲಂಗಾಣದಲ್ಲಿ 22 ವರ್ಷದ ಪಶುವೈದ್ಯಯ ಮೇಲೆ ಗ್ಯಾಂಗ್ ರೇಪ್ ಎಸಗಿ ಸುಟ್ಟು ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಏತನ್ಮಧ್ಯೆ ಅದೇ ಪ್ರದೇಶದಲ್ಲಿ ಮತ್ತೊಂದು ಮಹಿಳೆಯ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
35 ವರ್ಷ ಪ್ರಾಯದ ಮಹಿಳೆಯ ಶವ ಶಂಶಾಬಾದ್ ನ ಸಿಡ್ಲುಗುಟ್ಟಾ ರಸ್ತೆ ಸಮೀಪ ಪತ್ತೆಯಾಗಿದೆ. ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಮಹಿಳೆಯ ಮೇಲೂ ಅತ್ಯಾಚಾರ ಎಸಗಿ ಕೊಲೆಗೈಯಲಾಗಿದೆಯೇ ಎಂಬುದು ಇನ್ನಷ್ಟೇ ಖಚಿತವಾಗಬೇಕಾಗಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸೈಬರಾಬಾದ್ ಪೊಲೀಸ್ ಕಮಿಷನರ್ ವಿಸಿ ಸಜ್ಜನಗರ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ಪಶುವೈದ್ಯೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಸುಟ್ಟ ಪ್ರಕರಣಕ್ಕೂ, ಈ ಮಹಿಳೆ ಪ್ರಕರಣಕ್ಕೂ ಸಂಬಂಧ ಇದೆಯೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ.
ತೆಲಂಗಾಣದಲ್ಲಿ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಚಾಪೆಯಲ್ಲಿ ಸುತ್ತಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟ ಪ್ರಕರಣಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.