ಅನಂತಪುರ: ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಸರಕಾರಿ ಶಾಲೆಯಲ್ಲಿ ಇಬ್ಬರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ತರಗತಿಯ ಬೆಂಚ್ಗೆ ಕಟ್ಟಿಹಾಕಲಾಗಿದೆ. ಈ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಮಕ್ಕಳ ಹಕ್ಕು ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಮೂರನೇ ತರಗತಿಯ ಒಬ್ಬ ವಿದ್ಯಾರ್ಥಿ ಹಾಗೂ ಐದನೇ ತರಗತಿಯ ಒಬ್ಬ ವಿದ್ಯಾರ್ಥಿಯ ಕೈ ಹಾಗೂ ಕಾಲುಗಳನ್ನು ಬೆಂಚ್ಗೆ ಕಟ್ಟಿಹಾಕಲಾಗಿದೆ. ಅನಂತಪುರ ಜಿಲ್ಲೆಯ ಕದಿರಿ ನಗರದ ಶಾಲೆಯ ಶಿಕ್ಷಕರು ಈ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಹಿನ್ನೆಲೆ ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ಇಲಾಖಾವಾರು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದೂ ಮಕ್ಕಳ ಹಕ್ಕು ಕಾರ್ಯಕರ್ತ ಅಚ್ಯುತ ರಾವ್ ಹೇಳಿದ್ದಾರೆ.
ಇದಕ್ಕೆ ಸಂಬಂಧಪಟ್ಟಂತೆ ಸಮರ್ಥನೆ ಕೊಟ್ಟ ಮುಖ್ಯ ಶಿಕ್ಷಕಿ, ವಿದ್ಯಾರ್ಥಿಗಳನ್ನು ಕಟ್ಟಿಹಾಕಲು ಎರಡು ಕಾರಣಗಳನ್ನು ನೀಡಿದ್ದಾರೆ. ಅವರಲ್ಲಿ ಒಬ್ಬರು ಪ್ರೇಮ ಪತ್ರ ಬರೆದಿದ್ದರೆ, ಇನ್ನೊಬ್ಬರು ಇತರ ಮಕ್ಕಳ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ವಿದ್ಯಾರ್ಥಿಯನ್ನು ತಾನು ಕಟ್ಟಿ ಹಾಕಲಿಲ್ಲ. ವಿದ್ಯಾರ್ಥಿಯ ತಾಯಿಯೇ ಆ ರೀತಿ ಮಾಡಿದ್ದಾರೆ ಎಂದೂ ಸಮಜಾಯಿಷಿ ನೀಡಿದ್ದಾರೆ.
ಆದರೆ, ಶಾಲೆಯ ತರಗತಿಯಲ್ಲಿ ಈ ಘಟನೆ ನಡೆದಿದ್ದು ಹೇಗೆ ಎಂಬುದಕ್ಕೆ ಮಾತ್ರ ಮುಖ್ಯ ಶಿಕ್ಷಕಿ ಸೂಕ್ತ ಉತ್ತರ ನೀಡಲಿಲ್ಲ. ಈ ಸಂಬಂಧ ಸದ್ಯ ತನಿಖೆಗೆ ಆದೇಶಿಸಲಾಗಿದೆ. ಇನ್ನು, ಈ ಶಾಲೆಯಲ್ಲಿ ಈ ರೀತಿಯ ಶಿಕ್ಷೆ ನೀಡುವುದು ಸಾಮಾನ್ಯ ಎಂದು ಮಕ್ಕಳು ಹೇಳಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.