ನವದೆಹಲಿ: ಮಹಾತ್ಮಾ ಗಾಂಧಿಯವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯವರನ್ನು ಶ್ಲಾಘಿಸಿದ ಲೋಕಸಭಾ ಸದಸ್ಯೆ ಸಾಧ್ವಿ ಪ್ರಾಗ್ಯ ಠಾಕೂರ್ ಅವರಿಗೆ ಸರಿಯಾದ ಛಾಟಿಯೇಟು ಬೀಸಿರುವ ಭಾರತೀಯ ಜನತಾ ಪಾರ್ಟಿ ಅವರನ್ನು ಸಂಸತ್ ಅಧಿವೇಶನದ ವೇಳೆ ಸಂಸದೀಯ ಪಕ್ಷ ಸಭೆಯಲ್ಲಿ ಭಾಗವಹಿಸುವುದಕ್ಕೆ ತಡೆನೀಡಿದೆ. ಅಲ್ಲದೆ ರಕ್ಷಣಾ ಇಲಾಖೆಯ ಸಲಹಾ ಸಮಿತಿಯಿಂದ ಕೈಬಿಟ್ಟಿದೆ.
ಸಾಧ್ವಿ ಪ್ರಾಗ್ಯ ಠಾಕೂರ್ ವಿರುದ್ಧ ತೆಗೆದುಕೊಂಡಿರುವ ಶಿಸ್ತು ಕ್ರಮದ ಬಗ್ಗೆ ಪ್ರಕಟಿಸಿದ ಬಿಜೆಪಿ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ, ಲೋಕಸಭೆಯಲ್ಲಿ ನಿನ್ನೆ ಪ್ರಾಗ್ಯ ಠಾಕೂರ್ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ.
ಅಲ್ಲದೆ ಇತ್ತೀಚೆಗಷ್ಟೆ ರಕ್ಷಣಾ ಇಲಾಖೆಯ ಸಲಹಾ ಸಮಿತಿಗೆ ನೇಮಕಗೊಂಡಿದ್ದ ಸಾಧ್ವಿ ಪ್ರಾಗ್ನಿ ಠಾಕೂರ್ ಅವರನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರದೇಶ ಸಂಸದೆ ಸಾಧ್ವಿ ಪ್ರಾಗ್ಯ ಅವರು ನೀಡಿರುವ ಹೇಳಿಕೆ ಖಂಡನೀಯ. ಬಿಜೆಪಿ ಯಾವತ್ತಿಗೂ ಅಂತಹ ಹೇಳಿಕೆಗಳನ್ನು ಬೆಂಬಲಿಸುವುದಿಲ್ಲ ಮತ್ತು ಅಂತಹ ತತ್ವಗಳನ್ನು ಕೂಡ ಬೆಂಬಲಿಸುವುದಿಲ್ಲ. ಚಳಿಗಾಲ ಅಧಿವೇಶನದ ವೇಳೆ ಬಿಜೆಪಿ ಸಂಸದೀಯ ಪಕ್ಷದ ಸಭೆಗಳಲ್ಲಿ ಅವರು ಭಾಗವಹಿಸುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.