ಬೆಂಗಳೂರು, ನ.15-ಉಪಚುನಾವಣೆಗೆ ಬಾಕಿ ಇರುವ ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ಇಂದು ಸಂಜೆ ಅಥವಾ ನಾಳೆಯೊಳಗಾಗಿ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ.
ಸತತವಾಗಿ ನಾಲ್ಕೈದು ದಿನಗಳಿಂದಲೂ ಸಭೆಗಳ ಮೇಲೆ ಸಭೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಮಾತ್ರ ಅವಕಾಶವಿದೆ. ಹಾಗಾಗಿ ವಿಳಂಬ ಮಾಡದಂತೆ ಅಭ್ಯರ್ಥಿಗಳನ್ನು ಪ್ರಕಟಿಸಲು ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.
ಬಿಜೆಪಿಯಿಂದ ನಿನ್ನೆಯಷ್ಟೆ ಕಾಂಗ್ರೆಸ್ ಸೇರಿದ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಭರಮಗೌಡ ಕಾಗೆ ಅವರಿಗೆ ಟಿಕೆಟ್ ನೀಡುವುದು ಖಚಿತವಾಗಿದೆ. ಆದರೆ ಯಾವ ಕ್ಷೇತ್ರಕ್ಕೆ ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ಕಾಗವಾಡ ಅಥವಾ ಅಥಣಿ ಎರಡೂ ಕ್ಷೇತ್ರಗಳ ಪೈಕಿ ಯಾವುದಕ್ಕೆ ಬಿ ಫಾರಂ ಕೊಟ್ಟರೂ ಸ್ಪರ್ಧಿಸುವುದಾಗಿ ರಾಜು ಕಾಗೆ ಹೇಳಿದ್ದಾರೆ.
ಹೀಗಾಗಿ ಅಥಣಿಗೆ ರಾಜು ಕಾಗೆ ಅವರನ್ನು ನಿಲ್ಲಿಸಿ, ಕಾಗವಾಡಕ್ಕೆ ಪ್ರಕಾಶ್ ಹುಕ್ಕೇರಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ನಿನ್ನೆ ನಡೆದ ಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಗವಾಡದಿಂದ ರಾಜು ಕಾಗೆ ಕಣಕ್ಕಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಅಥಣಿಯಿಂದ ಪ್ರಕಾಶ್ ಹುಕ್ಕೇರಿ ಆಕಾಂಕ್ಷಿಯಾಗಿದ್ದರೂ ಕೂಡ ಗಜಾನನ ಮನಗೂಳಿ ಅವರನ್ನು ಕಣಕ್ಕಿಳಿಸಲು ತಯಾರಿ ನಡೆದಿದೆ.
ಗೋಕಾಕ್ ಕ್ಷೇತ್ರದಿಂದ ಲಖನ್ ಜಾರಕಿ ಹೊಳಿ ಸ್ಪರ್ಧಿಸುವುದು ಖಚಿತವಾಗಿದೆ. ಕೆ.ಆರ್.ಪೇಟೆಯಿಂದ ಕೆ.ಬಿ.ಚಂದ್ರಶೇಖರ್, ಯಶವಂತಪುರ ಕ್ಷೇತ್ರದಿಂದ ರಾಜ್ಕುಮಾರ್ ನಾಯ್ಡು ಕಣಕ್ಕಿಳಿಯಲಿದ್ದಾರೆ. ಬಳ್ಳಾರಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ಘಟಾನುಘಟಿ ನಾಯಕರು ಸ್ಪರ್ಧಿಸಲು ಹಿಂದೇಟು ಹಾಕಿದ್ದಾರೆ. ಹೀಗಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಮಾಮ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರ ಅತ್ಯಂತ ಗೊಂದಲದ ಗೂಡಾಗಿದ್ದು, ವಿಧಾನಪರಿಷತ್ ಸದಸ್ಯರಾದ ರಿಜ್ವಾನ್ ಅರ್ಷದ್, ನಜೀರ್ ಅಹಮ್ಮದ್ ಮತ್ತು ಎಐಸಿಸಿ ಕಾರ್ಯದರ್ಶಿ ಸಲೀಂ ಅಹಮ್ಮದ್ ಅವರ ಹೆಸರುಗಳನ್ನು ಹೈಕಮಾಂಡ್ಗೆ ರವಾನೆ ಮಾಡಲಾಗಿದೆ.