ಶ್ರೀನಗರ: ಭಾನುವಾರದಿಂದ ಜಮ್ಮು-ಕಾಶ್ಮೀರದ ಬಂಡಿಪೊರಾದಲ್ಲಿ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಒಟ್ಟು ಇಬ್ಬರು ಉಗ್ರರು ಭದ್ರತಾ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ.
ಭಾನುವಾರ ಲಾದಾರ ಗ್ರಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿತ್ತು. ಹಾಗೆಯೇ ಇಂದು ಬೆಳಗ್ಗೆ ಇನ್ನೋರ್ವ ಉಗ್ರ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರು ಕಾಶ್ಮೀರದಲ್ಲಿ ಅಡಗಿ ಕುಳಿತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ ಭದ್ರತಾ ಪಡೆ ಸಿಬ್ಬಂದಿ ಹುಡುಕಾಟ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಉಗ್ರರು ಹಾಗೂ ಯೋಧರ ನಡುವೆ ಗುಂಡಿನ ಕಾಳಗ ಶುರುವಾಯ್ತು.
ಈ ಸಂಬಂಧ ಚೀನಾರ್ ಕಾಪ್ಸ್- ಇಂಡಿಯನ್ ಆರ್ಮಿ ಟ್ವೀಟ್ ಮಾಡಿ, ಹತ್ಯೆಗೈದ ಉಗ್ರರಿಂದ ಶಸ್ತ್ರಾಸ್ತ್ರಗಳು ಹಾಗೂ ಯುದ್ಧಕ್ಕೆ ಬಳಸುವ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ನ. 7ರಂದು ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಸುಳಗೇಕರ್(22) ಯೋಧ ಜಮ್ಮುವಿನ ಪುಂಚ್ ಪ್ರದೇಶದಲ್ಲಿ ರಾತ್ರಿ ಉಗ್ರರ ಜೊತೆಗೆ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ್ದರು. ಗುರುವಾರ ರಾತ್ರಿ ಜಮ್ಮುವಿನ ಪೂಂಚ್ ವಲಯದಲ್ಲಿ ನಡೆದ ಅಪರೇಷನ್ ಟೆರರ್ ಕಾರ್ಯಾಚರಣೆಯಲ್ಲಿ ರಾಹುಲ್ ಅವರು ಭಾಗಿಯಾಗಿದ್ದರು. ಈ ವೇಳೆ ಉಗ್ರರು ಹಾಗೂ ಭಾರತೀಯ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿತ್ತು. ದಾಳಿ ಪ್ರತಿದಾಳಿಯಲ್ಲಿ ಉಗ್ರರ ವಿರುದ್ಧ ಹೋರಾಡುವಾಗ ರಾಹುಲ್ ಅವರು ವೀರ ಮರಣವನ್ನಪ್ಪಿದ್ದರು. ಶನಿವಾರ ಸಕಲ ಸರ್ಕಾರಿ, ಸೇನಾ ಗೌರವದೊಂದಿಗೆ ರಾಹುಲ್ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯ್ತು.