ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು

ಅಯೋಧ್ಯೆ ತೀರ್ಪು ಬರೆದ ಐವರು ನ್ಯಾಯಮೂರ್ತಿಗಳು ಇವರು
ವಿವಾದಿತ ರಾಮ ಜನ್ಮಭೂಮಿ ತೀರ್ಪು ಹೊರಬರುತ್ತಿದ್ದ ಹಿನ್ನೆಲೆಯಲ್ಲಿ ದೇಶದ ಜನರ ಗಮನ ಸುಪ್ರೀಂ ಕೋರ್ಟ್‌ನತ್ತ ನೆಟ್ಟಿತ್ತು. ಜನರ ಸುದೀರ್ಘ ಕಾತರ, ಕುತೂಹಲಗಳೀಗ ಅಂತ್ಯವಾಗಿವೆ. ಇಂತಹ ಸಂದರ್ಭದಲ್ಲಿ ಅಯೋಧ್ಯೆ ತೀರ್ಪು ನೀಡಿದ ಐದು‌ ನ್ಯಾಯಮೂರ್ತಿಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌: ಮೂಲತಃ ಅಸ್ಸಾಂ ರಾಜ್ಯದವರಾದ ರಂಜನ್‌ ಗೊಗೋಯ್‌ ಅವರು 2018 ರ ಅಕ್ಟೋಬರ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. ಈಶಾನ್ಯ ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿ ಎಂಬ ಹಿರಿಮೆಗೆ ಗೊಗೋಯ್‌ ಪಾತ್ರರಾಗಿದ್ದಾರೆ. ಅಸ್ಸಾಂ ರಾಜಧಾನಿ ಗೌಹಾಟಿಯಲ್ಲಿ ವೃತ್ತಿ ಆರಂಭಿಸಿದ ಅವರು ಫೆ.28, 2001 ರಂದು ಗೌಹಾಟಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡರು. ಮುಂದಿನ ದಿನಗಳಲ್ಲಿ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. 2012 ರ ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದರು. ರಂಜನ್‌ ಗೊಗೋಯ್‌ ಅವರು ತಮ್ಮ ವೃತ್ತಿ ಬದುಕಿನಲ್ಲಿ ರಾಷ್ಟ್ರೀಯ ನಾಗರಿಕ ನೋಂದಣಿಯಂತಹ ಹಲವು ಮಹತ್ವದ ಪ್ರಕರಣಗಳ ಬಗ್ಗೆ ತೀರ್ಪು ನೀಡಿದ್ದಾರೆ. ನ.01 ರಂದು ಅವರು ನಿವೃತ್ತಿ ಹೊಂದಲಿದ್ದಾರೆ.

ನ್ಯಾ.ಎಸ್‌ ಎ ಬೊಬ್ಡೆ: ನ.17 ರಂದು ರಂಜನ್‌ ಗೊಗೋಯ್‌ ಅವರ ನಿವೃತ್ತಿ ನಂತರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಶರದ್‌ ಅರವಿಂದ್‌ ಬೊಬ್ಡೆ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. 2000 ರಲ್ಲಿ ಮುಂಬೈ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಅವರು ಮಧ್ಯ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು. ಮೂಲತಃ ಮಹಾರಾಷ್ಟ್ರದವರಾದ ನ್ಯಾ.ಬೊಬ್ಡೆ ಅವರು 2013 ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ನೇಮಕವಾದರು.

ನ್ಯಾ. ಡಿ ವೈ ಚಂದ್ರಚೂಡ: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ಐ ವಿ ಚಂದ್ರಚೂಡ ಅವರ ಪುತ್ರರಾಗಿರುವ ಡಿ ವೈ ಚಂದ್ರಚೂಡ ಅವರು ಮೇ. 2016 ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮುರ್ತಿಯಾಗಿ ನೇಮಕಗೊಂಡರು. ಅವರು ಈ ಹಿಂದೆ ಬಾಂಬೆ ಮತ್ತು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಚಂದ್ರಚೂಡ ಅವರು ಅಕ್ರಮ ಸಂಬಂಧ ಮತ್ತು ಗೌಪ್ಯತೆ ಹಕ್ಕಿನಂತಹ ಹಲವು ಮಹತ್ವದ ತೀರ್ಪು ನೀಡಿದ ನ್ಯಾಯಮೂರ್ತಿಗಳ ಪೀಠವು ಚಂದ್ರಚೂಡ ಅವರನ್ನು ಒಳಗೊಂಡಿತ್ತು.

ನ್ಯಾ. ಅಶೋಕ್‌ ಭೂಷಣ್‌:1979 ರಲ್ಲಿ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ವೃತ್ತಿ ಜೀವನ ಆರಂಭಿಸಿದ ಅಶೋಕ್‌ ಭೂಷನ್‌ ಅವರು 2000 ರ ಏಪ್ರಿಲ್‌ನಲ್ಲಿ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಜುಲೈ, 2014 ರಲ್ಲಿ ಕೇರಳ ಹೈಕೋರ್ಟ್‌ಗೆ ವರ್ಗಾವಣೆಯಾದ ಅವರು ಕೆಲ ತಿಂಗಳ ಕಾಲ ಪ್ರಭಾರಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ನ್ಯಾ. ಭೂಷನ್‌ ಅವರು ಮೇ 13, 2016 ರಂದು ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡಿದ್ದಾರೆ.

ನ್ಯಾ. ಅಬ್ದುಲ್‌ ನಜೀರ್‌: ಮೂಲತಃ ಕರ್ನಾಟದವರಾದ ಅಬ್ದಲ್‌ ನಜೀರ್‌ ಅವರು ಫೆ.1983 ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಆರಂಭಿಸಿದರು. 2003 ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಫೆ.17, 2017 ರಂದು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕಗೊಂಡರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ