ಬೆಂಗಳೂರು, ನ.8-ಕನ್ನಡಿಗರಿಗೆ ಉದ್ಯೋಗ ಮತ್ತು ಕನ್ನಡ ನಾಮಫಲಕಕ್ಕೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ನಾಗರಾಜ್ ಅವರು ಮೈಸೂರು ಬ್ಯಾಂಕ್ ವೃತ್ತದ ಬಳಿ ಇಂದು ವಿನೂತನ ಚಳವಳಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿರುವ ಕೈಗಾರಿಕೆಗಳು, ಸಾಫ್ಟ್ವೇರ್ ಕಂಪನಿಗಳು, ಬ್ಯಾಂಕ್ಗಳು ಸೇರಿದಂತೆ ಎಲ್ಲೆಡೆ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಕೇಂದ್ರಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.
ನಮ್ಮ ನಾಡಿನ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳುವ ಕೈಗಾರಿಕೋದ್ಯಮಿಗಳು ನಾಡ ಮಕ್ಕಳಿಗೆ ಉದ್ಯೋಗ ನೀಡುವಲ್ಲಿ ಹಿಂದೇಟು ಹಾಕುತ್ತಿರುವುದು ಸಮಂಜಸವಲ್ಲ.ರೈಲ್ವೆ ಇಲಾಖೆ, ಬ್ಯಾಂಕ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳು ಕನ್ನಡದಲ್ಲಿ ನಡೆಯಬೇಕು. ಇದಕ್ಕಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ.ಮುಂದೆಯೂ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳನ್ನು ಹಾಕಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ ಬಹುತೇಕ ಕಡೆ ಕನ್ನಡ ನಾಮಫಲಕಗಳು ಕಾಣುತ್ತಿಲ್ಲ. ನೂತನ ಮೇಯರ್ ಗೌತಮ್ಕುಮಾರ್ ಜೈನ್ ಅವರು ನವೆಂಬರ್ 1 ರಂದು ನಾಮಫಲಕ ಹಾಕಲು ಆದೇಶ ನೀಡಿದ್ದರಾದರೂ ಯಾವುದೇ ಕ್ರಮಕೈಗೊಂಡಿಲ್ಲ. ಇದಕ್ಕಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷ ನಗರಾದ್ಯಂತ ಸಂಚರಿಸಿ ಕನ್ನಡ ಫಲಕಗಳನ್ನು ಹಾಕಲು ಹೋರಾಟ ಮಾಡುತ್ತದೆ.ಎಲ್ಲಾ ಮಾಲ್ಗಳು, ವಾಣಿಜ್ಯ ಕಟ್ಟಡಗಳಿಗೆ ಭೇಟಿ ನೀಡಿ ಮೆರವಣಿಗೆ ನಡೆಸಿ ಕನ್ನಡಿಗರಿಗೆ ಉದ್ಯೋಗ, ಕನ್ನಡದ ನಾಮಫಲಕಗಳನ್ನು ಹಾಕಬೇಕು.ನಾಡು, ನುಡಿ, ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕೆಂದು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.