ಬೆಂಗಳೂರು,ನ.7- ರಾಜ್ಯದಲ್ಲಿ ಜಲ ಪ್ರಳಯ ಉಂಟಾಗಿರುವ ಸಂದರ್ಭದಲ್ಲಿ ಮಳೆಗಾಗಿ ಮೋಡ ಬಿತ್ತನೆ ಮಾಡುವುದು ಬೇಡ ಎಂಬುದು ತಮ್ಮ ನಿರ್ಧಾರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೋಲಾರ್ ದೀಪಗಳ ಅಳವಡಿಕೆ ಕುರಿತು ಪಂಚಾಯತ್ ರಾಜ್ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಮೋಡ ಬಿತ್ತನೆ ಮಾಡಲು 2 ವರ್ಷದ ಟೆಂಡರ್ ಕರೆಯಲಾಗಿತ್ತು.ಆ ಟೆಂಡರ್ ಯಾರಿಗೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಅದರ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಲಾಗಿದೆ ಎಂದು ಹೇಳಿದರು.
ವರದಿ ಬಂದ ನಂತರ ಯಾರಿಗೆ ಟೆಂಟರ್ ಕೊಟ್ಟಿದ್ದಾರೆ, ಏನು ಕೆಲಸವಾಗಿದೆ ಎಂಬುದುನ್ನು ಪರಿಶೀಲಿಸಿ ತೀರ್ಮಾನ ಮಾಡಲಾಗುವುದು. ಆದರೆ ಸದ್ಯಕ್ಕೆ ಮೋಡ ಬಿತ್ತನೆ ಮುಂದುವರೆಸಬಾರದು ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಟೆಂಡರ್ನ್ನು ತಾತ್ಕಾಲಿಕವಾಗಿ ತಡೆ ಹಿಡಿದಿದ್ದೇವೆ ಎಂದು ಹೇಳಿದರು.
ಮೋಡ ಬಿತ್ತನೆ ಟೆಂಡರ್ ಯಾರಿಗೆ ಕೊಟ್ಟಿದ್ದಾರೆ ಎಂಬುದು ನಮಗೆ ಸಂಬಂಧವಿಲ್ಲ. ಆದರೆ ರಾಜ್ಯದ ಹಣ ಸರಿಯಾಗಿ ಬಳಕೆಯಾಗಬೇಕು. ಯಾಕೆ ಎರಡು ವರ್ಷದ ಅವಧಿಗೆ ಮೋಡ ಬಿತ್ತನೆ ಟೆಂಡರ್ ನೀಡಲಾಗಿತ್ತು ಎಂಬುದು ಗೊತ್ತಿಲ್ಲ. ಟೆಂಡರ್ ಅಗ್ರಿಮೆಂಟ್ನಲ್ಲಿ ಏನಿದೆ ಎಂಬುದು ಸದ್ಯಕ್ಕೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಸೋಲಾರ್ ದೀಪ:
ಗ್ರಾಮೀಣಾ ಭಾಗದಲ್ಲಿ ಸೋಲಾರ್ ದೀಪಗಳ ಅಳವಡಿಕೆಗೆ ಹೆಚ್ಚಿನ ಆದ್ಯತೆ ಕೊಡಲು ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾದ ಕಂಪನಿಯೇ 5 ವರ್ಷ ಸೋಲಾರ್ ದೀಪಗಳ ನಿರ್ವಹಣೆ ಮಾಡಬೇಕು. ಗ್ರಾಮ ಪಂಚಾಯತ್ಗಳ ಪಿಡಿಒಗಳೊಂದಿಗೆ ಈಗಾಗಲೆ ಚರ್ಚೆ ಮಾಡಲಾಗಿದೆ. ಘನತ್ಯಾಜ್ಯ ವಿಲೇವಾರಿ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ ಎಂದು ಈಶ್ವರಪ್ಪ ತಿಳಿಸಿದರು.
ಹಾವೇರಿ,ನ.7- ನೀರಾವರಿ ಯೋಜನೆಗಳ ಅನುಷ್ಠಾನ, ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸೇರಿದಂತೆ ರೈತರ ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ತಾವು ಕೆಲಸ ನಿರ್ವಹಿಸುವ ಭರವಸೆ ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ಅತಿವೃಷ್ಟಿಯಿಂದಾಗಿ ಉಂಟಾದ ಸಮಸ್ಯೆಗಳು, ಅದರಿಂದ ಬಾಧಿತರಾದವರಿಗೆ ಪರಿಹಾರ ವಿತರಣೆ ಯಾವ ರೀತಿಯಾಗಿದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಿದ್ದೇವೆ. ನಿನ್ನೆಯೂ ಸಹ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದೇನೆ. ನೂರು ದಿನಗಳು ಕಳೆದಿವೆ. ಬರುವ ನೂರು ದಿನಗಳಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಕಡೆಗೆ ಆದ್ಯತೆ ನೀಡಲಾಗುವುದು. ವಿರೋಧ ಪಕ್ಷಗಳ ಮಾತನ್ನು ಕೇಳಿ ಯಾರು ಬೇಸರಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜೊತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ನೂರು ದಿನಗಳಲ್ಲಿ ಸಾಕಷ್ಟು ಅತಿವೃಷ್ಟಿ ಸಮಸ್ಯೆಗಳನ್ನು ಎದುರಿಸಿದ್ದೇನೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ನಾಲ್ಕು ಸಾವಿರ ರೂ.ಗಳನ್ನು ರೈತರಿಗೆ ನೀಡಿದ್ದೇವೆ. ಅದರಲ್ಲಿ 2000 ರೂ.ಗಳನ್ನು ಬಿಡುಗಡೆಯಾಗಿದೆ. ಮೋದಿ ಅವರು ಸಹ ಆರು ಸಾವಿರ ರೂ.ಗಳನ್ನು ರೈತರಿಗೆ ನೀಡುತ್ತಿದ್ದಾರೆ. ದೇಶದಲ್ಲಿ ಯಾರೂ ಈ ರೀತಿ ನೀಡುತ್ತಿಲ್ಲ ಎಂದರು.
ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ. ಸಾಕಷ್ಟು ವಿದ್ಯುತ್ ಇದೆ. ಇದರ ಉಪಯೋಗಪಡೆದು ಕೃಷಿಕನಿಗೆ ಅನುಕೂಲ ಕಲ್ಪಿಸಲಾಗುವುದು.ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಇರುವುದು ದಾಖಲೆಯಾಗಿದೆ ಎಂದು ಹೇಳಿದರು.
ದೇವೇಗೌಡರೊಂದಿಗೆ ತಾವು ಮಾತನಾಡಿಲ್ಲ ಎಂದಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ವಿಷಯವನ್ನು ಮಾಧ್ಯಮದವರ ಮುಂದೆ ಚರ್ಚಿಸಲು ಇಷ್ಟ ಪಡುವುದಿಲ್ಲ ಎಂದ ಅವರು, ಅಗತ್ಯ ಬಂದಾಗ ಮಾತನಾಡುತ್ತೇನೆ. ನನ್ನ ಅವರ ಸಂಬಂಧ ಚೆನ್ನಾಗಿ ಎಂದಷ್ಟೇ ಹೇಳಲು ಬಯಸುತ್ತೇನೆ ಎಂದರು.
ಬಿಜೆಪಿಯವರೇ ಷಡ್ಯಂತ್ರ ರೂಪಿಸಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಕೇಳಲಾದ ಪ್ರಶ್ನೆಗೆ, ನನ್ನ ಬಗ್ಗೆ ಇಷ್ಟೆಲ್ಲ ಚಿಂತೆ ಮಾಡುತ್ತಿದ್ದಾರ ಎಂದು ಮರು ಪ್ರಶ್ನೆ ಹಾಕಿದರು.