ಬೆಂಗಳೂರು,ನ.7- ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದೆ ಎನ್ನಲಾದ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಸಿಬಿ ಪೋಲೀಸರು ಇಬ್ಬರು ಆಟಗಾರರನ್ನು ಬಂಧಿಸಿದ್ದಾರೆ.
ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ. ಗೌತಮ್ ಮತ್ತು ಅಬ್ರಾರ್ ಖಾಜಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
2019ರ ಕೆಪಿಎಲ್ ಫೈನಲ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂಬ ಆರೋಪವಿದೆ.
ಈ ಹಿನ್ನೆಲೆ ತನಿಖೆ ತೀವ್ರಗೊಳಿಸಿದ ಸಿಸಿಬಿ ಪೋಲೀಸರ ಬಲೆಗೆ ಬಳ್ಳಾರಿ ಟಸ್ಕರ್ಸ್ ತಂಡದ ಇಬ್ಬರು ಆಟಗಾರರು ಸಿಕ್ಕಿಬಿದ್ದಿದ್ದಾರೆ.
ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡುವುದಾಗಿ ಆಟಗಾರರು 20 ಲಕ್ಷ ರೂ.ಪಡೆದಿದ್ದರು. ಬುಕ್ಕಿಗಳ ಬಳಿ ಹಣ ಪಡೆದು ಇಬ್ಬರು ಆಟಗಾರರು ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಸಿ.ಎಂ.ಗೌತಮ್ ಅವರು ಕರ್ನಾಟಕದ ಪರವಾಗಿ ರಣಜಿ ಪಂದ್ಯಗಳಲ್ಲಿ, ಐಪಿಎಲ್ನಲ್ಲಿ ಮುಂಬೈ, ಆರ್ಸಿಬಿ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಟವಾಡಿದ್ದರು.ಇತ್ತ ಅಬ್ರರ್ ಖಾಜಿ ಕೂಡ ಕರ್ನಾಟಕ ತಂಡದ ರಣಜಿ ಆಟಗಾರರಾಗಿದ್ದಾರೆ. ಸದ್ಯ ಈ ಇಬ್ಬರು ಆಟಗಾರರಿಂದ ಪೋಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದ್ದಾರೆ.
ಆಗಸ್ಟ್ 31ರಂದು ಮೈಸೂರಿನಲ್ಲಿ ಬಳ್ಳಾರಿ ಟಸ್ಕರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವೆ ಕೆಪಿಎಲ್ ಫೈನಲ್ ಪಂದ್ಯ ನಡೆದಿತ್ತು.ಇದೇ ವೇಳೆ ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವಿದೆ.
ಈಗಾಗಲೇ ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಫ್ಯಾಂಥರ್ಸ್ ತಂಡದ ಮಾಲೀಕ ಅಶ್ಪಾಕ್ ಅಲಿ ತಾರ್, ಬಳ್ಳಾರಿ ಟಸ್ಕರ್ಸ್ ತಂಡದ ಡ್ರಮ್ಮರ್ ಭವೇಶ್, ಬೆಂಗಳೂರು ಬ್ಲಾಸ್ಟರ್ ತಂಡದ ಬೌಲಿಂಗ್ ಕೋಚ್ ವಿನು ಪ್ರಸಾದ್ ಹಾಗೂ ಬ್ಯಾಟ್ಸ್ಮನ್ ವಿಶ್ವನಾಥನ್ ಅವರನ್ನು ಸಿಸಿಬಿ ಪೋಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಶೀಘ್ರದಲ್ಲೇ ಇನ್ನಷ್ಟು ಮಂದಿ ಪೋಲೀಸರ ಬಲೆಗೆ ಸಿಕ್ಕಿಬೀಳುವ ಸಾಧ್ಯತೆ ಇದೆ.
ಲುಕ್ ಔಟ್ ನೋಟಿಸ್ ಜಾರಿ :
ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಸಿಸಿಬಿ ಪೋಲೀಸರು ದೆಹಲಿಯ ಇಬ್ಬರು ಬುಕ್ಕಿಗಳ ಬಂಧನಕ್ಕೆ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ಬುಕ್ಕಿಗಳಾದ ಜತ್ತಿನ್, ಸಯ್ಯಾಂ ವಿದೇಶದಲ್ಲಿ ತಲೆ ಮರಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸಿ, ನಗರಕ್ಕೆ ಕರೆತರಲು ಪ್ರಯತ್ನ ಮುಂದುವರಿದಿದೆ.ತಲೆಮರೆಸಿಕೊಂಡಿರುವ ಬುಕ್ಕಿಗಳು ಇಂಡಿಯನ್ ಪ್ರೀಮಿಯರ್ (ಐಪಿಎಲ್) ಕ್ರಿಕೆಟ್ ಪಂದ್ಯಗಳಲ್ಲೂ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಶಂಕೆ ಇದೆ.ಅಂತರರಾಷ್ಟ್ರೀಯ ಆಟಗಾರರ ಜತೆ ಸಯ್ಯಾಂ ಸಂಪರ್ಕ ಹೊಂದಿದ್ದ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ಬುಕ್ಕಿಗಳ ಬಂಧನಕ್ಕಾಗಿ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಎಲ್ಲ ವಿಮಾನ ನಿಲ್ದಾಣಗಳಿಗೆ ಆರೋಪಿಗಳ ಕುರಿತು ಮಾಹಿತಿ ರವಾನಿಸಲಾಗಿದ್ದು, ಅವರ ಬಗ್ಗೆ ವಿಷಯ ತಿಳಿದರೆ, ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.