ಬೆಂಗಳೂರು, ನ.೫- ನವೆಂಬರ್ ೧೦ರೊಳಗೆ ಇಡೀ ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲಾಗುವುದು ಎಂದು ಮೇಯರ್ ಗೌತಮ್ಕುಮಾರ್ ಜೈನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ನಗರದ ಹಲವಾರು ರಸ್ತೆಗಳು ಗುಂಡಿಬಿದ್ದಿವೆ. ಹಾಗಾಗಿ ನ.೧೦ರೊಳಗೆ ಎಲ್ಲ ಗುಂಡಿ ಮುಚ್ಚುವಂತೆ ಅಧಿಕಾರಿಗಳಿಗೆ ಗಡುವು ನೀಡಿದ್ದೇನೆ ಎಂದು ಹೇಳಿದರು.
ನಿನ್ನವರೆಗೆ ಸುಮಾರು ಮೂರು ಸಾವಿರ ಗುಂಡಿ ಮುಚ್ಚಿದ್ದೇವೆ. ಇನ್ನು ಶೇ.೫೦ರಷ್ಟು ಬಾಕಿ ಇವೆ. ಅವುಗಳನ್ನು ನ.೧೦ರೊಳಗೆ ಮುಚ್ಚುವಂತೆ ಆದೇಶಿಸಿದ್ದೇನೆ ಎಂದರು.
ಬಹುತೇಕ ಗುಂಡಿಗಳನ್ನು ಮುಚ್ಚುತ್ತೇವೆ. ಆದರೆ, ಕೆಲವು ರಸ್ತೆಗಳು ಸಂಪೂರ್ಣ ಹಾಳಾಗಿವೆ. ಅವುಗಳನ್ನು ಪುನರ್ ನಿರ್ಮಿಸಬೇಕು. ಇದರ ಕಾಮಗಾರಿಗಳನ್ನು ಈಗಲೇ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.
ಬೆಸ್ಕಾಂನವರು ಎಚ್ಡಿ ಕೇಬಲ್ ಅಳವಡಿಸಲು ರಸ್ತೆ ಅಗೆಯುತ್ತಿದ್ದಾರೆ. ಹಾಗಾಗಿ ಬೆಸ್ಕಾಂ ಮತ್ತು ಜಲಮಂಡಳಿಯವರಿಗೆ ಗುಂಡಿ ಮುಚ್ಚುವ ಕಾಮಗಾರಿ ಮುಗಿಯುವ ತನಕ ಕಾಮಗಾರಿ ಮಾಡಬಾರದೆಂದು ತಿಳಿಸಿದ್ದೇವೆ ಎಂದು ಹೇಳಿದರು.
ಸುಮನಹಳ್ಳಿ ಮೇಲ್ಸೇತುವೆ ಬಿರುಕು ಬಿಡಲು ಕಳಪೆ ಕಾಮಗಾರಿ ಕಾರಣ.ಇದರ ಗುತ್ತಿಗೆ ಪಡೆದ ಸಂಸ್ಥೆ ಮುಚ್ಚಿ ಹೋಗಿದೆ. ಆದ್ದರಿಂದ ಬಿಬಿಎಂಪಿ ಉಸ್ತುವಾರಿ ನೋಡಿಕೊಳ್ಳುತ್ತಿದೆ.ನಾಳೆ ಈ ಸೇತುವೆಯ ಬಿರುಕಿಗೆ ವಿಶೇಷ ಕಾಂಕ್ರೀಟ್ ಹಾಕುತ್ತಾರೆ. ಹಾಗಾಗಿ ಮುಂದೆ ಸಮಸ್ಯೆ ಉದ್ಭವಿಸಲ್ಲ ಎಂದು ಭರವಸೆ ನೀಡಿದರು.
ಇದರ ಜತೆಗೆ ನ.೭ರಿಂದ ನಾನು ಮತ್ತು ಆಯುಕ್ತರು ನಗರದ ಎಲ್ಲಾ ಮೇಲ್ಸೇತುವೆಗಳನ್ನು ಪರಿಶೀಲಿಸುತ್ತೇವೆ. ಎಲ್ಲೆಲ್ಲಿ ಸಮಸ್ಯೆ ಇದೆಯೋ ಅದನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಮೇಯರ್ ತಿಳಿಸಿದರು.
ನಗರದಲ್ಲಿರುವ ಇಂದಿರಾ ಕ್ಯಾಂಟಿನ್ಗಳ ಟೆಂಡರ್ ಕಳೆದ ಆಗಸ್ಟ್ನಲ್ಲೇ ಮುಗಿದಿದೆ. ಮರು ಟೆಂಡರ್ ಕರೆಯುವ ಕಾರ್ಯ ಪ್ರಗತಿಯಲ್ಲಿದೆ. ಕ್ಯಾಂಟಿನ್ಗಳಿಗೆ ಸರ್ಕಾರದಿಂದ ಬರಬೇಕಾದ ಅನುದಾನ ಇನ್ನೂ ಬಂದಿಲ್ಲ. ಪಾಲಿಕೆಯೇ ಭರಿಸುತ್ತಿದೆ. ಈ ಕುರಿತು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ ಎಂದರು.
ನಾಯಂಡಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟಿನ್ ಕಿಚನ್ ಖಾಲಿ ಮಾಡಿಸುವಂತೆ ಸಚಿವ ವಿ.ಸೋಮಣ್ಣ ಅವರು ಧಮ್ಕಿ ಹಾಕಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ತಿಳಿದು ನಂತರ ಪ್ರತಿಕ್ರಿಯಿಸುತ್ತೇನೆ ಎಂದು ಮೇಯರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.