ಬೆಂಗಳೂರು,ನ.೪- ಬಿಜೆಪಿ ಸರ್ಕಾರ ನವೆಂಬರ್ ೨ಕ್ಕೆ ನೂರು ದಿನ ಪೂರ್ಣಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ೧೦೦ ಪುಟಗಳುಳ್ಳ ಸಾಧನೆಯ ಪುಸ್ತಕವನ್ನು ನಾಳೆ ಬಿಡುಗಡೆ ಮಾಡಲಾಗುತ್ತಿದೆ.
ನಾಳೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿ, ೧೦೦ ದಿನ ೧೦೦ ಸಾಧನೆಗಳು ಎಂಬ ಸರ್ಕಾರದ ಸಾಧನೆಯುಳ್ಳ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಈ ಸಾಧನಾ ಪುಸ್ತಕ ಎಲ್ಲಾ ಇಲಾಖೆಗಳಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳು, ನೆರೆ ಪರಿಹಾರ, ಬರ ಪರಿಹಾರ, ಸರ್ಕಾರ ಬಿಡುಗಡೆ ಮಾಡಿರುವ ಅನುದಾನಗಳು, ಕಿಸಾನ್ ಸಮ್ಮಾನ್ ಯೋಜನೆ, ಮೀನುಗಾರರ ಸಾಲಮನ್ನಾ, ನೇಕಾರರ ಸಾಲಮನ್ನಾ ಮಾಹಿತಿಯನ್ನು ಒಳಗೊಂಡಿದೆ.
ಜೊತೆಗೆ ಮುಂದಿನ ದಿನಗಳ ಕಾರ್ಯ ಸೂಚಿಯನ್ನು ಈ ಪುಸ್ತಕ ಒಳಗೊಂಡಿದೆ. ಅಂತೆಯೇ ಇಲಾಖಾವಾರು ಸಾಧನೆಗಳೂ ಪುಸ್ತಕದಲ್ಲಿರಲಿದೆ.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ೧೦೦ ದಿನಗಳ ಸಾಧನೆಯ ಪುಸ್ತಕಗಳನ್ನು ಆಯಾ ಜಿಲ್ಲೆಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.
ನವೆಂಬರ್ ೧೧ರ ಬಳಿಕ ರಾಜ್ಯದಲ್ಲಿ ೧೫ ಕ್ಷೇತ್ರಗಳ ಉಪ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಹಿನ್ನೆಲೆ, ನಾಳೆಯೇ ಪುಸ್ತಕ ಬಿಡುಗಡೆ ಮಾಡಲಾಗುತ್ತಿದೆ. ಆ ಮೂಲಕ ಸರ್ಕಾರ ಚುನಾವಣೆ ಎದುರಿಸುವ ತಂತ್ರ ರೂಪಿಸಿದೆ.
ನೆರೆ ಮತ್ತು ಅತಿವೃಷ್ಟಿ ಹಿನ್ನೆಲೆ ಸರ್ಕಾರ ೧೦೦ ದಿನ ಪೂರ್ಣಗೊಳಿಸಿದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸದೆ, ಕೇವಲ ಸಾಧನೆಯ ಪುಸ್ತಕದ ಮೂಲಕ ಸರಳವಾಗಿ ಆಚರಣೆ ಮಾಡಲಾಗುತ್ತಿದೆ.
ಸಾಧನಾ ಪುಸ್ತಕ ಬಿಡುಗಡೆ ಮೂಲಕ ವಿಪಕ್ಷಗಳ ಆರೋಪಗಳಿಗೂ ಯಡಿಯೂರಪ್ಪ ಉತ್ತರ ಕೊಡುವ ಪ್ರಯತ್ನ ಮಾಡಲಿದ್ದಾರೆ ಎನ್ನಲಾಗುತ್ತಿದೆ.