ಹಿಂದಿನ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಿಗೆ ಮನ್ನಣೆ ಸಿಗುತ್ತಿತ್ತು-ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಅ.31- ಈ ಹಿಂದಿನ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಟಾವಂತರಿಗೆ ಮನ್ನಣೆ ಸಿಗುತ್ತಿತ್ತು.ಆದರೆ, ಈಗ ನಿಷ್ಟೆ ಎಂಬುದು ಹೊಣೆಗಾರಿಕೆ ಎಂದು ಭಾವಿಸಿದಂತಿದೆ. ಪ್ರಾಮಾಣಿಕತೆ ಅಪರಾಧ ಎಂಬಂತಾಗಿದೆ ಎಂದು ರಾಜ್ಯಸಭಾ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 35ನೇ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಾಬಾಯಿ ಪಟೇಲ್ ಅವರ 114ನೇ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ಅವರು ಸ್ಪರ್ಧಿಸಿದ್ದಾಗ ತಾವು ವಿದ್ಯಾರ್ಥಿ ನಾಯಕರಾಗಿದ್ದೆವು. ಕೆಲಸ ಮಾಡುತ್ತಿದ್ದ ನಮ್ಮನ್ನು ಗುರುತಿಸಿದ್ದ ಇಂದಿರಾಗಾಂಧಿ ಅವರು ದೆಹಲಿಗೆ ಬರುವಂತೆ ಆಹ್ವಾನಿಸಿದ್ದರು.ಚುನಾವಣೆ ನಂತರ ಭೇಟಿ ಮಾಡಿದಾಗ ಪಕ್ಷದಲ್ಲಿ ಏನಾಗಬೇಕೆಂದು ಪ್ರಶ್ನೆ ಕೇಳಿದರು.ತನಗೆ ಬೆಂಗಳೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷನಾಗುವ ಆಸೆ ಇತ್ತು. ಒಂದೇ ದಿನದಲ್ಲಿ  ಇಂದಿರಾಗಾಂಧಿ ಅವರು ನನ್ನನ್ನು ಎನ್‍ಎಸ್‍ಯುಐನ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಯನ್ನಾಗಿ ನೇಮಿಸಿದರು. ಆಗ ನಿಷ್ಟೆಗೆ ಆ ರೀತಿಯ ಪ್ರತಿಫಲಗಳು ಸಿಗುತ್ತಿದ್ದವು. ಆದರೆ, ಈಗ ಪ್ರಾಮಾಣಿಕತೆಯೇ ಅಪರಾಧವಾಗಿದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷ ಬೆಳೆಯಬೇಕಾದರೆ ನಿಷ್ಟರಿಗೆ ಅವಕಾಶಗಳನ್ನು ಕೊಡಬೇಕೆಂದು ಸಲಹೆ ನೀಡಿದರು.

ಇಂದಿರಾಗಾಂಧಿ ಈ ದೇಶದ ಉಕ್ಕಿನ ಮಹಿಳೆಯಾದರೆ, ಸರ್ದಾರ್ ವಲ್ಲಭ ಭಾಯಿ ಪಟೇಲ್ ದೇಶದ ಉಕ್ಕಿನ ಪುರುಷ ಎಂದು ವ್ಯಾಖ್ಯಾನಿಸಿದ ಅವರು, ಬಿಜೆಪಿಯವರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಯಾವ ವ್ಯಕ್ತಿಯೂ ಇಲ್ಲ. ಅದಕ್ಕಾಗಿ ಕಾಂಗ್ರೆಸ್‍ನ ನಾಯಕರನ್ನು ಯರವಲು ತೆಗೆದುಕೊಳ್ಳುತ್ತಿದ್ದಾರೆ ಎಂದರು.

ಇತಿಹಾಸ ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ, ಆರ್‍ಎಸ್‍ಎಸ್‍ನವರು ಬ್ರಿಟಿಷರ ಏಜೆಂಟರಾಗಿ ಸ್ವಹಿತಾಸಕ್ತಿ ನೋಡಿಕೊಂಡರು.ಕಾಂಗ್ರೆಸಿಗರು ದೇಶಕ್ಕಾಗಿ ಹೋರಾಟ ನಡೆಸಿದರು.

ಗೋಲ್‍ವಾಲ್ಕರ್, ವೀರಸಾವರ್ಕರ್ ಅವರನ್ನು ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರಾಹುಲ್‍ಗಾಂಧಿ ಅವರಿಗೆ ದೇಶದ ಪ್ರಧಾನಿ ಆಗುವ ಆಸೆ ಇರಲಿಲ್ಲ. ತಮ್ಮ  ಕುಟುಂಬದಿಂದ ಸಾಕಷ್ಟು ಮಂದಿ ಪ್ರಧಾನಿಯಾಗಿದ್ದಾರೆ. ಕಾಂಗ್ರೆಸ್ ಸಿದ್ದಾಂತಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದರು.ನಾವು ಅವರನ್ನು ಪ್ರಧಾನಿಯಾಗುವಂತೆ ಒತ್ತಾಯ ಮಾಡಿದ್ದೆವು ಎಂದರು.

ಈಗಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ದೇಶದ ದಿಕ್ಕು ತಪ್ಪಿಸುತ್ತಿದ್ದಾರೆ.ಮಹಾತ್ಮಗಾಂಧಿ ಅವರು ಹುಟ್ಟಿದ ಪೆÇೀರ್‍ಬಂದರ್ ಇಂದು ಮಾಫಿಯಾಗಳ ಹಿಡಿತದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಮಾತನಾಡಿ, ಇಂದಿರಾಗಾಂಧಿ ಅವರು ಶೀತಲಸಮರ ನಡೆಯುತ್ತಿದ್ದ ಕಾಲದಲ್ಲಿ ಅಮೆರಿಕದ ವಿರುದ್ಧ ಧ್ವನಿ ಎತ್ತಿ ಅಬ್ಬರಿಸುವ ಮೂಲಕ ಮೂರನೇ ಮಹಾಯುದ್ಧ ತಪ್ಪಿಸಿದ ಧೀಮಂತ ಮಹಿಳೆ.ಆದರೆ, ಈಗಿನ ಪ್ರಧಾನಿ ಮೋದಿ ಅವರು ಹೋದಲೆಲ್ಲಾ ಹೊಗಳು ಬಟ್ಟತನ ಮಾಡುತ್ತಿದ್ದಾರೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಅವರನ್ನು ಭಾರತದ ರಾಷ್ಟ್ರಪಿತ ಎಂದು ಕರೆದಿದ್ದಾರೆ.ಗಾಂಧೀಜಿ ಬಗ್ಗೆ ಗೌರವ ಇದ್ದಿದ್ದರೆ ಮೋದಿ ಸ್ಥಳದಲ್ಲೇ ಅದಕ್ಕೆ ಸ್ಪಷ್ಟೀಕರಣ ನೀಡಬೇಕಿತ್ತು.ಆದರೆ, ಅವರು ಆ ರೀತಿ ಮಾಡಲಿಲ್ಲ ಎಂದರು.

ಗಾಂಧೀಜಿ ಕೊಲೆಯಾದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರು ಆರ್‍ಎಸ್‍ಎಸ್‍ನ್ನು ನಿಷೇಧಿಸುವ ಪ್ರಬಲ ಕಾನೂನು ತಂದಿದ್ದರು.ಆದರೆ, ಅದಕ್ಕೆ ಪ್ರಧಾನಿ ನೆಹರು ವಿರೋಧ ವ್ಯಕ್ತಪಡಿಸಿ ವಿಭಿನ್ನ ವಿಚಾರಗಳ ಸಂಸ್ಥೆಗಳು ಅಸ್ಥಿತ್ವದಲ್ಲಿ ಇರಬೇಕು.ಅಧಿಕಾರ ಇದೆ ಎಂದು ಯಾವುದನ್ನೂ ನಿಷೇಧ ಮಾಡಬಾರದು ಎಂದು ಪಟೇಲ್ ಅವರನ್ನು ತಡೆದರು.ಇಂದು ಬಿಜೆಪಿಯವರು ಪಟೇಲ್ ಅವರ ಪ್ರತಿಮೆ ನಿರ್ಮಾಣ ಮಾಡಿದ್ದಾರೆ.ಕಾಂಗ್ರೆಸ್ ಧೀಮಂತ ನಾಯಕನ ಪ್ರತಿಮೆ ಮಾಡಿರುವುದನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಟಿಪ್ಪು ಸುಲ್ತಾನ್ ಇತಿಹಾಸ ಅಳಿಸಲು ಪ್ರಯತ್ನ ನಡೆಯುತ್ತಿದೆ. ಆದರೆ, ಅದು ಅಷ್ಟು ಸುಲಭ ಅಲ್ಲ ಎಂದು ಮೊಯ್ಲಿ ಎಚ್ಚರಿಕೆ ಕೊಟ್ಟರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಟಿಪ್ಪು ಸುಲ್ತಾನ್ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿಕೆ ದಡ್ಡತನದ ಪರಮಾವಧಿ,  ನಾವು ನಮ್ಮ ಪಕ್ಷ ಟಿಪ್ಪು ಪರವಾದ ನಿಲುವಿಗೆ ಬದ್ಧರಾಗಿದ್ದೇವೆ, ಯಾವುದೇ ಕಾರಣಕ್ಕೂ ಬಾಯಿ ಮುಚ್ಚಿಕೊಂಡು ಸಹಿಸುವುದಿಲ್ಲ ಎಂದರು.

ಬಿಜೆಪಿಯವರು ನೆಹರು ಮತ್ತು ಇಂದಿರಾಗಾಂಧಿ ಅವರನ್ನು ತಪ್ಪಾಗಿ ಅರ್ಥೈಸುವ ಪ್ರಯತ್ನ ಮಾಡುತ್ತಿದ್ದಾರೆ.ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಜವಹರಲಾಲ್ ನೆಹರು ನಡುವೆ ಭಿನ್ನಾಭಿಪ್ರಾಯಗಳು ಇದ್ದದ್ದು ನಿಜ. ಆದರೆ, ಅಭಿಪ್ರಾಯ ಭೇದಗಳನ್ನು ತಪ್ಪಾಗಿ ಬಿಂಬಿಸುವುದು ಸರಿಯಲ್ಲ. ಬಿಜೆಪಿಯ ಹಿರಿಯ ನಾಯಕರಾದ ಲಾಲ್‍ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಶಿ ಅವರನ್ನು ಮೂಲೆಗುಂಪು ಮಾಡಿದ್ದು ಯಾರು? ವಾಜಪೇಯಿ ಅವರನ್ನು ಸ್ಮರಣೆ ಮಾಡದೇ ಇರುವುದು ಯಾರು ?ಕಾಂಗ್ರೆಸ್‍ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಎಂ.ರೇವಣ್ಣ, ಮೋಟಮ್ಮ, ಬಿ.ಎಲ್.ಶಂಕರ್, ರಾಜಶೇಖರ್ ಪಾಟೀಲ್ ಹಿಟ್ನಾಳ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ