ಬೆಂಗಳೂರು, ಅ.22- ಡಿಸೆಂಬರ್ 5ರಂದು ನಡೆಯುವ ರಾಜ್ಯದ 15 ವಿಧಾನಸಭೆಗಳ ಉಪ ಚುನಾವಣೆ ಸಂಬಂಧ ಕೈಗೊಳ್ಳಬೇಕಾದ ಕಾರ್ಯತಂತ್ರ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಬಿಜೆಪಿ ನಾಳೆ ಕೋರ್‍ಕಮಿಟಿ ಸಭೆ ಕರೆದಿದೆ.
ನಾಳೆ ಸಂಜೆ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಕೋರ್‍ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸದಸ್ಯರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ ಸೇರಿದಂತೆ ಮತ್ತಿತರ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ಮುಖ್ಯವಾಗಿ ದಕ್ಷಿಣ ಕರ್ನಾಟಕ ಭಾಗದ ಹುಣಸೂರು, ಕೆ.ಆರ್.ಪೇಟೆ, ಚಿಕ್ಕಬಳ್ಳಾಪುರ, ಹೊಸಕೋಟೆ, ರಾಜಧಾನಿ ಬೆಂಗಳೂರಿನ ಯಶವಂತಪುರ, ಮಹಾಲಕ್ಷ್ಮಿಲೇಔಟ್, ಶಿವಾಜಿನಗರ ಹಾಗೂ ಕೆ.ಆರ್.ಪುರಂ ವಿಧಾನಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಯಲಿದೆ.
ನಾಳೆ ಸುಪ್ರೀಂಕೋರ್ಟ್‍ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಇತ್ಯರ್ಥವಾಗುವ ಸಾಧ್ಯತೆ ಇರುವುದರಿಂದ ನ್ಯಾಯಾಲಯದ ತೀರ್ಪು ನೋಡಿಕೊಂಡು ಚುನಾವಣೆಗಾಗಿ ಕಾರ್ಯತಂತ್ರವನ್ನು ರೂಪಿಸಲಿದೆ.
ಜತೆಗೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಉಂಟಾಗಿರುವ ಗೊಂದಲ ನಿವಾರಣೆ, ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ಕೆ.ಆರ್.ಪುರಂನಲ್ಲಿ ಕಾಂಗ್ರೆಸ್‍ನ ಅನರ್ಹ ಶಾಸಕ ಬೈರತಿಬಸವರಾಜ್‍ಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಬೇಕೆಂಬ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಈ ಕ್ಷೇತ್ರದ ಮೇಲೆ ಮಾಜಿ ಶಾಸಕ ನಂದೀಶ್‍ರೆಡ್ಡಿ ಕಣ್ಣಿಟ್ಟಿದ್ದಾರೆ. ಅವರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಅಧ್ಯಕ್ಷ ಸ್ಥಾನ ನೀಡಿದ್ದರೂ ಈವರೆಗೂ ಅಧಿಕಾರ ಸ್ವೀಕರಿಸಿಲ್ಲ.
ಮಹಾಲಕ್ಷ್ಮಿಲೇಔಟ್‍ನಲ್ಲೂ ಮುಖಂಡರಾದ ಎಸ್.ಹರೀಶ್, ಎಂ.ನಾಗರಾಜ್, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಆಕಾಂಕ್ಷಿಯಾಗಿದ್ದಾರೆ. ಇಲ್ಲಿಯೂ ಜೆಡಿಎಸ್‍ನ ಅನರ್ಹ ಶಾಸಕ ಗೋಪಾಲಯ್ಯ ಅವರನ್ನೇ ಕಣಕ್ಕಿಳಿಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.
ಹೀಗೆ ಇನ್ನುಳಿದ ಕ್ಷೇತ್ರಗಳಲ್ಲಿ ಅನರ್ಹರಿಗೆ ಸ್ವ ಪಕ್ಷದವರೇ ತೊಡೆತಟ್ಟಿರುವುದರಿಂದ ಅವರನ್ನು ಯಾವ ರೀತಿ ಮನವೊಲಿಸಬೇಕು, ಇಲ್ಲವೇ ಪಕ್ಷಾಂತರವಾದರೆ ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.
ಉಳಿದಂತೆ ಯಶವಂತಪುರ, ಶಿವಾಜಿನಗರ, ಹೊಸಕೋಟೆ, ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ ಹಾಗೂ ಹುಣಸೂರಿನಲ್ಲಿ ಬಿಜೆಪಿಗೆ ಅಂತಹ ಬಂಡಾಯದ ಬಿಸಿ ತಟ್ಟಿಲ್ಲ.
ಗುರುವಾರ ಮತ್ತೊಂದು ಸಭೆ:
ಉಪ ಚುನಾವಣೆ ಸಂಬಂಧ ಉತ್ತರ ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಬಿಜೆಪಿ ಗುರುವಾರ ಹುಬ್ಬಳ್ಳಿಯಲ್ಲಿ ಕೋರ್‍ಕಮಿಟಿ ಸಭೆ ಕರೆದಿದೆ.
ಹಿರೇಕೆರೂರು, ರಾಣೇಬೆನ್ನೂರು, ವಿಜಯನಗರ (ಹೊಸಪೇಟೆ), ಯಲ್ಲಾಪುರ, ಅಥಣಿ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ಈ ಹಿಂದೆ ಬಿಜೆಪಿಯಿಂದ ಮುನಿಸಿಕೊಂಡಿದ್ದ ಕೆಲವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತಾದರೂ ಇದುವರೆಗೂ ಅಧಿಕಾರ ಸ್ವೀಕರಿಸಿಲ್ಲ.
ವಾಯುವ್ಯ ಸಾರಿಗೆ ಸಂಸ್ಥೆ ಉಪಾಧ್ಯಕ್ಷರಾಗಿ ನೇಮಕವಾಗಿದ್ದ ಯಲ್ಲಾಪುರದ ಬಿಜೆಪಿ ಮುಖಂಡ ವಿ.ಎಸ್.ಪಾಟೀಲ್ ಮಾತ್ರ ಅಧಿಕಾರ ಸ್ವೀಕರಿಸಿದ್ದಾರೆ. ಉಳಿದಂತೆ ವಿಜಯನಗರದ ಗವಿಯಪ್ಪ, ಮಸ್ಕಿಯ ಬಸವರಾಜ ತುರ್ವಿಹಾಳ, ಹಿರೇಕೆರೂರ್‍ನ ಯು.ಬಿ.ಬಣಕಾರ್, ಗೋಕಾಕ್‍ನ ಅಶೋಕ್ ಪೂಜಾರಿ, ಕಾಗವಾಡದ ರಾಜುಕಾಗೆ ಅಧಿಕಾರ ಸ್ವೀಕರಿಸಿಲ್ಲ.
ಇದರಲ್ಲಿ ಕೆಲವರು ಪಕ್ಷಾಂತರ ಮಾಡುವ ಸಾಧ್ಯತೆ ಇರುವುದರಿಂದ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ರಣ ತಂತ್ರ ರೂಪಿಸಲಿದ್ದಾರೆ.
ಉಪ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚಿನ ಸ್ಥಾನ ಗೆಲ್ಲಿಸಬೇಕಾದ ಅಗತ್ಯವಿರುವುದರಿಂದ ಒಂದು ತಿಂಗಳ ಮುಂಚಿತವಾಗಿಯೇ ಪಕ್ಷ ಅಖಾಡಕ್ಕಿಳಿಯಲು ಸಿದ್ಧತೆ ಮಾಡಿಕೊಂಡಿದೆ.