ನವದೆಹಲಿ, ಏ.3-ಸುಳ್ಳು ಸುದ್ದಿ ಸೃಷ್ಟಿಸುವ ಮತ್ತು ಹಬ್ಬಿಸುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವುದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿನ್ನೆ ಹೊರಡಿಸಿದ ಪ್ರಕಟಣೆಯನ್ನು ಹಿಂದಕ್ಕೆ ಪಡೆಯಲಾಗಿದೆ.
ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ದೇಶವ್ಯಾಪಿ ಮಾಧ್ಯಮ ವಲಯದಿಂದ ತೀವ್ರ ಅಸಮಾಧಾನವಾದ ಬೆನ್ನಲ್ಲೇ ಪ್ರಧಾನಮಂತ್ರಿಯವರ ಕಚೇರಿ(ಪಿಎಂಒ), ಸಚಿವಾಲಯಕ್ಕೆ ಸೂಚನೆ ನೀಡಿ ಈ ಪ್ರಕಟಣೆಯನ್ನು ವಾಪಸ್ ಪಡೆಯುವಂತೆ ತಿಳಿಸಿತ್ತು.
ಮುದ್ರಣ ಮಾಧ್ಯಮಗಳಿಗೆ ಸಂಬಂಧಿಸಿದ ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಭಾರತೀಯ ಪತ್ರಿಕಾ ಮಂಡಳಿಗೆ(ಪಿಸಿಐ) ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಸುದ್ದಿ ಪ್ರಸಾರಕರ ಸಂಘಟನೆಗೆ(ಎನ್‍ಬಿಎ) ವಹಿಸಲಾಗುವುದು. ಈ ಸಂಸ್ಥೆಗಳು ಇಂಥ ಪ್ರಕರಣಗಳಿಗೆ ಸಂಬಂಧಪಟ್ಟಂತೆ 15 ದಿನಗಳ ಒಳಗೆ ತೀರ್ಮಾನ ಕೈಗೊಳ್ಳಬೇಕೆಂದು ಇಲಾಖೆ ಹೇಳಿತ್ತು.
ಆರೋಪ ದಾಖಲಾದ ಕೂಡಲೇ ವಿಚಾರಣೆ ಪೂರ್ಣಗೊಳ್ಳುವವರೆಗೆ ಅನ್ವಯವಾಗುವಂತೆ ಅಂಥ ಪತ್ರಕರ್ತರ ಮಾನ್ಯತೆಯನ್ನು ಅಮಾನತ್ತಿನಲ್ಲಿಡಲಾಗುತ್ತದೆ ಎಂದು ತಿಳಿಸಲಾಗಿತ್ತು.
ಈಗ ಪ್ರಧಾನಮಂತ್ರಿಯವರ ಕಾರ್ಯಾಲಯದ ಸೂಚನೆ ಹಿನ್ನೆಲೆಯಲ್ಲಿ ತನ್ನ ಪ್ರಕಟಣೆಯನ್ನು ಸಚಿವಾಲಯ ಹಿಂದಕ್ಕೆ ಪಡೆದಿದೆ.