ನವದೆಹಲಿ,ಅ.21- ದೆಹಲಿಯ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದ ಡಿ.ಕೆ.ಸುರೇಶ್ ಇಂದು ಭೇಟಿ ಮಾಡಿದರು.
ಇಂದು ಬೆಳಗ್ಗೆ ಕುಮಾರಸ್ವಾಮಿ ಮತ್ತು ಸುರೇಶ್ ಡಿಕೇಶಿ ಅವರನ್ನು ಭೇಟಿ ಮಾಡಿ ಸಮಾಲೊಚನೆ ನಡೆಸಿದರು.
ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದೊಂದು ಸೌಹಾರ್ದಯುತವಾದ ಭೇಟಿ. ಡಿ.ಕೆ.ಶಿವಕುಮಾರ್ ಅವರು ಧೈರ್ಯದಿಂದಿದ್ದು ಮುಂದಿನ ಹೋರಾಟಕ್ಕೆ ಮಾನಸಿಕವಾಗಿ ಸಿದ್ದರಾಗುತ್ತಿದ್ದಾರೆ ಎಂದರು.
ಎಲ್ಲ ಸಂಕಷ್ಟಗಳನ್ನು ಎದುರಿಸಿ ಹೊರಬರುವ ವಿಶ್ವಾಸವನ್ನು ಡಿ.ಕೆ.ಶಿವಕುಮಾರ್ ವ್ಯಕ್ತಪಡಿಸಿದರು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್‍ಗೆ ಏಕೆ ಹೀಗಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.ಸಾವರ್ಕರ್ ವಿಚಾರದ ಬಗ್ಗೆ ಚರ್ಚೆ ಮಾಡುವುದಿಲ್ಲ. ಆಗ ನಾನು ಹುಟ್ಟೇ ಇರಲಿಲ್ಲ ಒಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುತ್ತಾರೆ.ಈ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಎಂದರು.
ನೆರೆ ಬಗ್ಗೆ ಗಮನವಿಲ್ಲ: ಬಿಜೆಪಿ ನಾಯಕರಿಗೆ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಚಿಂತೆಯಿಲ್ಲ. ಮಹಾರಾಷ್ಟ್ರದ ಚುನಾವಣಾ ಪ್ರಚಾರಕ್ಕೆ ಹೋಗುತ್ತಾರೆ ಎಂದು ಆರೋಪಿಸಿದ ಎಚ್‍ಡಿಕೆ, ವಿಧಾನಸಭೆಯಲ್ಲಿ ಹಣದ ಸಮಸ್ಯೆ ಇಲ್ಲ ಎನ್ನುತ್ತಾರೆ. ಆದರೆ ಹೊರಗಡೆ ಮುಖ್ಯಮಂತ್ರಿ ರಾಜ್ಯದ ಖಜಾನೆ ಖಾಲಿಯಾಗಿದೆ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಈ ರೀತಿ ಕೈ ಚೆಲ್ಲಿ ಕೂರಬಾರದು.ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ನೆರೆ ಪರಿಹಾರದ ಸಮಸ್ಯೆಗಳನ್ನು ಆಲಿಸಿ ಸೂಕ್ತ ರೀತಿಯಲ್ಲಿ ಪರಿಹಾರ ಕಾರ್ಯ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ಸಿ.ಎಸ್.ಪುಟ್ಟರಾಜು ಅವರು ಡಿಕೆಶಿ ಅವರನ್ನು ಭೇಟಿ ಮುಂದಾಗುತ್ತಿದ್ದಂತೆ ಜೈಲಿನ ಅಧಿಕಾರಿಗಳು ಭೇಟಿಗೆ ಅವಕಾಶ ನೀಡಲಿಲ್ಲ.
ದಿನವೊಂದಕ್ಕೆ ಮೂರು ಮಂದಿಗೆ ಮಾತ್ರ ಭೇಟಿ ಮಾಡುವ ಅವಕಾಶವಿದ್ದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಈ ಇಬ್ಬರು ಸಚಿವರಿಗೆ ಅವಕಾಶ ನಿರಾಕರಿಸಲಾಗಿದೆ ಎನ್ನಲಾಗಿದೆ.