ಬೆಂಗಳೂರು,ಅ.18- ರಾಜ್ಯ ಸರ್ಕಾರದಲ್ಲಿ 101 ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಹುದ್ದೆ ಖಾಲಿಯಿದೆ. ಸರ್ಕಾರದಡಿ ಒಟ್ಟು 529 ಹುದ್ದೆಗಳಿದ್ದು, ಸದ್ಯ 428 ಮಂದಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಧಿಕಾರಿಗಳ ಕೊರತೆಯಿಂದಾಗಿ ಈಗಿರುವವರು ಒಂದಕ್ಕಿಂತ ಹೆಚ್ಚು ಇಲಾಖೆಗಳನ್ನು ನಿಭಾಯಿಸಬೇಕಾಗಿದೆ.ಮುಂದಿನ ವರ್ಷದ ಅಂತ್ಯದ ಹೊತ್ತಿಗೆ ಸುಮಾರು 25 ಅಧಿಕಾರಿಗಳು ರಾಜೀನಾಮೆ ನೀಡಲಿರುವುದರಿಂದ ಈಗಿರುವ ಅಧಿಕಾರಿಗಳ ಮೇಲೆ ಕೆಲಸದ ಹೊರೆ ಹೆಚ್ಚಾಗಲಿದೆ.
ಡಿಪಿಎಆರ್ ಪ್ರಕಾರ 314 ಅನುಮೋದಿತ ಐಎಎಸ್ ಹುದ್ದೆಗಳಿದ್ದು, ಅವುಗಳ ಪೈಕಿ ಈಗ 256 ಹುದ್ದೆಗಳಲ್ಲಿ ಅಧಿಕಾರಿಗಳಿದ್ದಾರೆ.ಐಪಿಎಸ್ ಅಧಿಕಾರಿಗಳ ಹುದ್ದೆಗಳಲ್ಲಿ 172 ಅಧಿಕಾರಿಗಳಿದ್ದು ಅನುಮೋದಿತ ಹುದ್ದೆಗಳ ಸಂಖ್ಯೆ 215 ಆಗಿದೆ.ಈ ವರ್ಷ 13 ಐಎಎಸ್ ಅಧಿಕಾರಿಗಳು ನಿವೃತ್ತಿ ಹೊಂದುತ್ತಿದ್ದು ಐಪಿಎಸ್ ವಿಭಾಗಗಳಲ್ಲಿ ನಾಲ್ವರು ಈ ವರ್ಷ ನಿವೃತ್ತಿ ಹೊಂದಲಿದ್ದಾರೆ.
ಮುಂದಿನ ವರ್ಷ ನಿವೃತ್ತಿಯಾಗುವ ಅಧಿಕಾರಿಗಳ ಪಟ್ಟಿಯನ್ನು ನಾವು ಸಿದ್ದ ಮಾಡುತ್ತಿದ್ದೇವೆ. ಅದರ ಪ್ರಕಾರ 16 ಐಎಎಸ್ ಮತ್ತು 12 ಐಪಿಎಸ್ ಅಧಿಕಾರಿಗಳು 2020ರ ಕೊನೆಗೆ ನಿವೃತ್ತಿಯಾಗುತ್ತಿದ್ದಾರೆ.2017ರಲ್ಲಿ 75 ಐಎಎಸ್ ಅಧಿಕಾರಿಗಳ ಕೊರತೆಯಿತ್ತು.ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸದ್ಯ 58 ಐಎಎಸ್ ಅಧಿಕಾರಿಗಳ ಕೊರತೆಯಿದೆ.1990ರ ದಶಕದಲ್ಲಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಕೊರತೆ ಆರಂಭವಾಯಿತು.ವಾರ್ಷಿಕವಾಗಿ ಅಧಿಕಾರಿಗಳನ್ನು ಸೇರಿಸಿಕೊಳ್ಳುವ ಪ್ರವೃತ್ತಿ 150 ರಿಂದ 80ಕ್ಕೆ ಇಳಿಕೆಯಾಯಿತು.
ಇವುಗಳಲ್ಲಿ ಕರ್ನಾಟಕಕ್ಕೆ ಪ್ರತಿವರ್ಷ ನಾಲ್ಕು ಅಥವಾ ಅದಕ್ಕಿಂತಲೂ ಕಡಿಮೆ ಅಧಿಕಾರಿಗಳು ಸಿಗುತ್ತಿದ್ದರು.ಕೆಲವು ವರ್ಷಗಳ ಹಿಂದೆಯಷ್ಟೇ ವಾರ್ಷಿಕವಾಗಿ ಅಂತರ ಭಾರತೀಯ ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಸಂಖ್ಯೆ 180ಕ್ಕೆ ಏರಿಕೆಯಾಯಿತು.ರಾಜ್ಯ ಸರ್ಕಾರ ಪ್ರತಿ ವರ್ಷ 9 ಅಥವಾ 10 ಅಧಿಕಾರಿಗಳನ್ನು ಪಡೆದುಕೊಳ್ಳುತ್ತದೆ.