ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿಕೆಗೆ ನೆಟ್ಟಿಗರ ಹಿಗ್ಗಾಮುಗ್ಗ ತರಾಟೆ

ಬೆಂಗಳೂರು, ಅ.18- ಸಿದ್ದರಾಮಯ್ಯ ವಿರುದ್ಧ ದನಿ ಎತ್ತಿದವರ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆಗೆ ಒಳಪಡುತ್ತಿರುವುದನ್ನು ನೋಡಿದರೆ ಇದು ಯಾರ ಕೈವಾಡ ? ಬಹುಶಃ ಸಿದ್ದರಾಮಯ್ಯನವರದ್ದೇ ಇರಬಹುದೇ ಎಂದು ಟ್ವಿಟ್ ಮಾಡಿದ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಇತ್ತೀಚಿನ  ದಿನಗಳಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಟ್ಟುಕೊಂಡು ನಿರಂತರವಾಗಿ ದಾಳಿ ನಡೆಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಕಾಂಗ್ರೆಸ್ ನಾಯಕರು ಈ ಕುರಿತು ಸಮಯ ಸಿಕ್ಕಾಗಲೆಲ್ಲಾ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ  ಇದ್ದಾರೆ.

ಈ ನಡುವೆ ಬಿ.ಸಿ.ಪಾಟೀಲ್ ಅವರ  ಟ್ವಿಟ್  ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೆಲವು ಮಂದಿ ಬಿ.ಸಿ.ಪಾಟೀಲ್ ಅವರ ಹೇಳಿಕೆಯನ್ನು ಅನುಮೋದಿಸಿ ಬೆಂಬಲ ವ್ಯಕ್ತಪಡಿಸಿದರೆ. ಇನ್ನು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡಿಮೆ ವೋಟುಗಳ ಅಂತರದಿಂದ ಗೆದ್ದಿದ್ದ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದೀರಾ. ಮುಂದಿನ ಉಪ ಚುನಾವಣೆಯಲ್ಲಿ ಸೋಲಬಹುದೆಂಬ ಆತಂಕದಿಂದ ಬಾಯಿಗೆ ಬಂದಂತೆ ಬಡಬಡಿಸುತ್ತಿದ್ದೀರಾ ಎಂದು ನೆಟ್ಟಿಗರು ಬಿ.ಸಿ.ಪಾಟೀಲ್ ವಿರುದ್ಧ ಹರಿಹಾಯ್ದಿದ್ದಾರೆ.

ಜಾರಿ ನಿರ್ದೇಶನಾಲಯ ಸಿದ್ದರಾಮಯ್ಯ ಅವರ ಮಾತು ಕೇಳುತ್ತದೆ ಎಂದಾದರೆ ಸೋನಿಯಗಾಂಧಿ ಅವರ ಮಾತನ್ನು ಚೆನ್ನಾಗಿ ಕೇಳಬಹುದಲ್ಲವೆ. ಕಾಂಗ್ರೆಸಿಗರ ಮೇಲಿನ ದಾಳಿ ನಿಲ್ಲಿಸಬಹುದಿತ್ತಲ್ಲವೇ ಎಂದು ಕೆಲವರು ಪ್ರಶ್ನಿಸಿದ್ದಾರೆ.

ತಾನೇ ರಾಜರಾಗಿರಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ. ಇವರು ಇರುವವರೆಗೂ ಕಾಂಗ್ರೆಸ್ ಬೆಳೆಯೊಲ್ಲ ಎಂದು ಮತ್ತೆ ಕೆಲವರು ಟೀಕೆ ಮಾಡಿದ್ದಾರೆ.

ಇನ್ನೂ ಕೆಲವರು ಬಿ.ಸಿ.ಪಾಟೀಲ್ ಅವರನ್ನು ಏಕವಚನದಲ್ಲಿ ಅಶ್ಲೀಲವಾಗಿ ನಿಂದಿಸಿ ತರಾಟೆಗೆ ತೆಗೆದುಕೊಂಡಿದ್ದು, ನೂರಾರು ಮಂದಿ ಬಿ.ಸಿ.ಪಾಟೀಲ್ ಅವರ ಟ್ವಿಟ್‍ಗೆ ಪ್ರತಿಕ್ರಿಯಿಸಿದ್ದಾರೆ.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ