ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಇಂದು ಬೆಳಗ್ಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ವಿಶ್ವವಿಖ್ಯಾತ ಮೈಸೂರು ದಸರಾ ಮುಗಿದ ಬಳಿಕ ಚಾಮುಂಡಿ ರಥೋತ್ಸವ ಆಚರಿಸಲಾಗುತ್ತದೆ.
ಯದುವಂಶದ ಯದುವೀರ್ ಒಡೆಯರ್ ರಥ ಎಳೆದು ಚಾಮುಂಡಿ ರಥೋತ್ಸವಕ್ಕೆ ಚಾಲನೆ ನೀಡಿದರು. ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ದೊಡ್ಡ ರಥದಲ್ಲಿಟ್ಟು ದೇವಾಲಯದ ಸುತ್ತ ಒಂದು ಸುತ್ತು ಹಾಕಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗುತ್ತದೆ. ಸಾವಿರಾರು ಮಂದಿ ಭಕ್ತರು ಈ ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥ ಎಳೆದು ಚಾಮುಂಡೇಶ್ವರಿ ದರ್ಶನ ಪಡೆದು ಪುನೀತರಾದರು.
ರಥೋತ್ಸವದ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ, ಯದುವೀರ್ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಚಾಮುಂಡೇಶ್ವರಿ ದರ್ಶನ ಪಡೆದರು. ರಥೋತ್ಸವ ಸಾಗುವ ಮಾರ್ಗದಲ್ಲಿ ನಿಂತು ಚಾಮುಂಡಿ ದೇವಿಗೆ ನಮನ ಸಲ್ಲಿಸಿದರು.
ಬಳಿಕ ಪ್ರಮೋದಾವಿ ಮತ್ತು ಯದುವೀರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. “ದಸರಾ ಯಶಸ್ವಿಯಾಗಿ ಮುಗಿದಿದೆ. ಸಂಪ್ರದಾಯದಂತೆ ಚಾಮುಂಡೇಶ್ವರಿ ರಥೋತ್ಸವ ನಡೆದಿದೆ. ರಾಜ್ಯಕ್ಕೆ ಮಳೆ-ಬೆಳೆ ಸುಭಿಕ್ಷವಾಗಿ ಇರಲಿ ಎಂದು ಪ್ರಾರ್ಥಿಸಿದ್ದೇವೆ,” ಎಂದು ಹೇಳಿದರು.