ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ; ಸರ್ಕಾರದ ನಡೆಯನ್ನು ಖಂಡಿಸಿ ಪತ್ರಕರ್ತರ ಪ್ರತಿಭಟನೆ

ಬೆಂಗಳೂರು; ಗುರುವಾರದಿಂದ ವಿಧಾನಸೌಧದಲ್ಲಿ ಬಿಜೆಪಿ ಸರ್ಕಾರದ ಮೊದಲ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಆದರೆ, ದುರಾದೃಷ್ಟವಶಾತ್ ಭಾರತದ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಾಧ್ಯಮಗಳನ್ನು ಅಧಿವೇಶನದಿಂದ ಹೊರಗಿಟ್ಟಿರುವ ಕೆಟ್ಟ ಸಂಪ್ರದಾಯಕ್ಕೆ ರಾಜ್ಯ ಬಿಜೆಪಿ ಸರ್ಕಾರ ನಾಂದಿ ಹಾಡಿದೆ. ಸರ್ಕಾರ ಹಾಗೂ ಸ್ಪೀಕರ್ ಅವರ ನಡೆಗೆ ಕಟು ವಿರೋಧ ವ್ಯಕ್ತಪಡಿಸಿರುವ ಪತ್ರಕರ್ತರು ಇಂದು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆಯಲ್ಲಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಅನೇಕ ಪತ್ರಕರ್ತರು ಪಾಲ್ಗೊಂಡಿದ್ದಾರೆ. ಅಲ್ಲದೆ, ರಾಜ್ಯ ಬಿಜೆಪಿ ಸರ್ಕಾರ ಹಾಗೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿರುವ ಹಿರಿಯ ಪತ್ರಕರ್ತ ಆರ್.ಟಿ. ವಿಠಲ್ಮೂರ್ತಿ, “ವಿಧಾನ ಸೌಧ ಕಟ್ಟುವಾಗ ಕೆಂಗಲ್ ಹನುಮಂತಯ್ಯ ಯಾವ ಆಶಯ ಇಟ್ಟುಕೊಂಡು ಕಟ್ಟಿದ್ರೋ ಅದನ್ನ ಮರೆಯಬೇಡಿ. ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಸ್ಪೀಕರ್ ಕಾಗೇರಿ ನಿರ್ಧಾರ ಅಲ್ಲ. ಕಾಗೇರಿಯವರ ನಿರ್ಧಾರದ ಹಿಂದೆ ಬೇರೆ ಶಕ್ತಿ ಇದೆ. ಕಾಗೇರಿಯವರ ಹೆಗಲ ಮೇಲೆ ಬಂದೂಕು ಇಟ್ಟು ಯಡಿಯೂರಪ್ಪಗೆ ಹೊಡೆಯುತ್ತಿದ್ದಾರೆ. ಮಾಧ್ಯಮಗಳು ಅದರ ಮೊದಲ ಬಲಿಪಶುಗಳಾಗಿದ್ದಾರೆ.

ಈ ರಾಜಕಾರಣಿಗಳು ವಿಧಾನ ಸಭೆಯಲ್ಲಿ ಏನು ಮಾಡಿದ್ರು ಅನ್ನೋದು ಜನತೆಗೆ ಗೊತ್ತಿದೆ. ನೀವೇನು ಐತಿಹಾಸಿಕ ಸಿನಿಮಾ ನೋಡಿಲ್ಲ. ಅಶ್ಲೀಲ ಸಿನಿಮಾ ನೋಡಿದ್ರಿ. ಅದನ್ನ ತೋರಿಸಿದ್ದು ತಪ್ಪಾ?, ಈ ತಪ್ಪಿಗೆ ಮಾಧ್ಯಮಗಳನ್ನು ಅಧಿವೇಶನದಿಂದ ಹೊರಗಿಟ್ಟಿದ್ದೀರ? ಸ್ಪೀಕರ್ ಕಾಗೇರಿ ಅವರನ್ನು ನಾವು ಹಿಂದಿನಿಂದ ನೋಡುತ್ತಿದ್ದೇವೆ ಆದರೆ, ಅವರು ಈಗ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ