ಬೆಂಗಳೂರು, ಅ.9-ವಿಧಾನಸಭೆಯ ಅಧಿವೇಶನ ನಾಳೆಯಿಂದ ಆರಂಭಗೊಳ್ಳುತ್ತಿದ್ದರು ಕಾಂಗ್ರೆಸ್ ವಿಪಕ್ಷನಾಯಕನ ಆಯ್ಕೆಗೆ ಈವರೆಗೂ ಮೀನಾಮೇಷ ಎಣಿಸುತ್ತಿದೆ.
ಒಂದು ವೇಳೆ ಇಂದು ಸಂಜೆಯೊಳಗೆ ಕಾಂಗ್ರೆಸ್ ಹೈಕಮಾಂಡ್ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡದಿದ್ದರೆ, ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಪಕ್ಷ ನಾಯಕನ ಹೊರತಾಗಿ ಅಧಿವೇಶನ ನಡೆದಿರುವ ಅಪಕೀರ್ತಿ ಕಾಂಗ್ರೆಸ್ ಹೈಕಮಾಂಡ್ಗೆ ಬರಲಿದೆ.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ವಿರೋಧ ಪಕ್ಷದ ನಾಯಕರನ್ನಾಗಿ ಘೋಷಣೆ ಮಾಡಬೇಕೆಂಬ ಒತ್ತಾಸೆ ಕೇಳಿ ಬಂದಿದ್ದವು. ಆದರೆ ಏಕಾಏಕಿ ಚುರುಕಾದ ಮೂಲ ಕಾಂಗ್ರೆಸಿಗರು ಸಿದ್ದರಾಮಯ್ಯನವರಿಗೆ ಅಡ್ಡಗಾಲಾಗಿದರು.ಇದು ಹೈಕಮಾಂಡ್ಗೆ ಹೊಸ ತಲೆನೋವು ತಂದಿಟ್ಟಿತ್ತು.
ಹಾಗಾಗಿ ಹಲವು ಸುತ್ತಿನ ಕಸರತ್ತುಗಳು ನಡೆದಿವೆ. ಸಿದ್ದರಾಮಯ್ಯ ಅವರೊಂದಿಗೆ ಹಿರಿಯ ಕಾಂಗ್ರೆಸಿಗ ಎಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ, ಡಾ. ಜಿ.ಪರಮೇಶ್ವರ್, ರಮೇಶ್ಕುಮಾರ್ ಸೇರಿದಂತೆ ಹಲವಾರು ಮಂದಿ ಪೈಪೆÇೀಟಿ ನಡೆಸಿದ್ದಾರೆ. ಮೂಲ ಕಾಂಗ್ರೆಸಿಗರಾದ ಬಿ.ಕೆ.ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪಮೊಯ್ಲಿ ಸೇರಿದಂತೆ ಹಲವಾರು ಮಂದಿ ಸಿದ್ದರಾಮಯ್ಯವರಿಗೆ ಅಡ್ಡಗಾಲಾಗಿ ನಿಂತಿದ್ದಾರೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದು, ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ.ಒಂದು ವೇಳೆ ಅವರು ಹೊರಗಡೆ ಇದ್ದಿದ್ದೇ ಆಗಿದ್ದರೆ. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪ್ರಬಲ ಸ್ಪರ್ಧಿಯಾಗಿರುತ್ತಿದ್ದರು.
ಕಳೆದ ಮೂರು ತಿಂಗಳಿನಿಂದಲೂ ಕಾಂಗ್ರೆಸ್ ವಿರೋಧ ಪಕ್ಷದ ನಾಯಕನ ಆಯ್ಕೆ ನಿರ್ಧಾರ ಪ್ರಕಟಿಸದೆ ಮೀನಾಮೇಷ ಎಣಿಸುತ್ತಿದೆ. ಇತ್ತೀಚೆಗೆ ಎಐಸಿಸಿ ವೀಕ್ಷಕರಾಗಿ ಬೆಂಗಳೂರಿಗೆ ಆಗಮಿಸಿದ ಹಿರಿಯ ಕಾಂಗ್ರೆಸಿಗ ಮಧುಸೂದನ್ ಮಿಸ್ತ್ರಿ ನೂರಾರು ಮಂದಿ ಕಾಂಗ್ರೆಸಿಗರ ಅಭಿಪ್ರಾಯ ಸಂಗ್ರಹಿಸಿ ವಿರೋಧಪಕ್ಷದ ನಾಯಕ ಸ್ಥಾನ ಮತ್ತು ಶಾಸಕಾಂಗ ಪಕ್ಷದ ನಾಯಕ ಸ್ಥಾನ ಎರಡನ್ನು ಬೇರೆ ಬೇರೆ ಮಾಡಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿಯೇ ಮುಂದುವರೆಸುವುದು, ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡುವ ಕುರಿತಂತೆ ಅಭಿಪ್ರಾಯ ಸಂಗ್ರಹಿಸಿದರು.
ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಒಬ್ಬರನ್ನೆ ನೇಮಿಸಬೇಕೆಂಬ ಸಲಹೆಗಳು ಕೇಳಿ ಬಂದಿವೆ. ಹೀಗಾಗಿ ಹೈಕಮಾಂಡ್ಗೆ ಮತ್ತಷ್ಟು ತಲೆನೋವು ಎದುರಾಗಿದೆ.ಪಕ್ಷದಲ್ಲಿ ಸಿದ್ದರಾಮಯ್ಯ ಅತ್ಯಂತ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದು, ವಿಪಕ್ಷ ನಾಯಕನ ಆಯ್ಕೆ ಮಾಡುವುದು ಕಷ್ಟ ಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ.
ಹೀಗಾಗಿ ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಿ ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟು ಸಿದ್ದರಾಮಯ್ಯ ಅವರನ್ನೇ ವಿಪಕ್ಷ ನಾಯಕರನ್ನಾಗಿ ಮುಂದುವರೆಸುವ ಚಿಂತನೆ ನಡೆದಿದೆ ಎನ್ನಲಾಗಿದೆ.
ಇಂದು ಸಂಜೆಯೊಳಗಾಗಿ ವಿಪಕ್ಷ ನಾಯಕನ ಆಯ್ಕೆ ಆಗದಿದ್ದರೆ.ನಾಳೆ ನಡೆಯುವ ಅಧಿವೇಶನದಲ್ಲಿ ವಿಪಕ್ಷ ಶಾಸಕರು ನಾಯಕನಿಲ್ಲದ ಸೇನೆಯಂತಾಗಲಿದ್ದಾರೆ.