ಬೆಂಗಳೂರು,ಅ.9-ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದರೂ ಕಾಂಗ್ರೆಸ್‍ನಲ್ಲಿ ಇನ್ನೂ ಪ್ರತಿಪಕ್ಷದ ನಾಯಕನನ್ನೇ ಆಯ್ಕೆ ಮಾಡಿಲ್ಲ. ಸರ್ಕಾರದ ವಿರುದ್ದ ಟೀಕೆ ಮಾಡುವ ಮೊದಲು ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್‍ನಾರಾಯಣ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುತ್ತಾರೆ.ಬೇರೆಯವರ ಕಡೆ ಬೆರಳು ತೋರಿಸುವ ಬದಲು ನಿಮ್ಮ ಕಡೆ ಎಷ್ಟು ಬೆರಳು ತೋರುತ್ತಿವೆ ಎಂಬುದನ್ನು ನೋಡಿಕೊಳ್ಳಿ ಎಂದು ತಿರುಗೇಟು ನೀಡಿದರು.
ಪ್ರತಿಪಕ್ಷಗಳ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಅಲ್ಲಿ ನಡೆಯುವ ಯಾವುದೇ ಬೆಳವಣಿಗೆ ಬಗ್ಗೆಯೂ ಗಮನಹರಿಸಿಲ್ಲ. ಆದರೆ ನಮ್ಮ ಬಗ್ಗೆ ಅನಗತ್ಯವಾಗಿ ಗೊಂದಲ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮನೆಯಲ್ಲೇ ಸದ್ಯ ಬೆಂಕಿ ಬಿದ್ದಿದೆ.ನೀವು ಅದನ್ನು ಆರಿಸಿಕೊಳ್ಳುವ ಕೆಲಸ ಮಾಡಿ.ಕಲಾಪದಲ್ಲಿ ಪ್ರತಿಪಕ್ಷಗಳು ಯಾವುದೇ ವಿಷಯದ ಬಗ್ಗೆ ಪ್ರಸ್ತಾಪಿಸಿದರೂ ಆ ಬಗ್ಗೆ ನಾವು ಕೂಡ ಚರ್ಚೆಗೆ ಸಿದ್ದವಿದ್ದೇವೆ. ರಚನಾತ್ಮಕವಾದ ಚರ್ಚೆಯಾಗಲಿ ಎಂದು ಅವರು ಆಶಿಸಿದರು.
ಸರ್ಕಾರ ತಪ್ಪು ಮಾಡಿದರೆ ಪ್ರತಿಪಕ್ಷಗಳು ಬಯಲಿಗೆಳೆದರೆ ಸ್ವಾಗತ. ಆದರೆ ಆಧಾರರಹಿತವಾಗಿ ಆರೋಪಿಸಿ ರಾಜಕಾರಣ ಮಾಡುವುದು ಬೇಡ. ರಾಜ್ಯದಲ್ಲಿ ಪ್ರಚಲಿತ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚೆ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು.
ಕಲಾಪದಲ್ಲಿ ರಾಜಕೀಯ ಪ್ರೇರಿತ ಚರ್ಚೆ ಮಾಡುವುದು ಅನಗತ್ಯ.ಸುಮ್ಮನೆ ತವಡು ಕುಟ್ಟುವುದರಲ್ಲಿ ಅರ್ಥವಿಲ್ಲ. ಸರ್ಕಾರಕ್ಕೆ ಯಾವುದೇ ಸಲಹೆ ಕೊಟ್ಟರೂ ಅದನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ನಮ್ಮಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಹೇಳಿದರು.
ಈ ಹಿಂದೆ ರಾಜ್ಯದಲ್ಲಿ ಪ್ರವಾಹ ಮತ್ತು ಬರ ಬಂದಾಗ ಕಾಂಗ್ರೆಸ್ ಹೇಗೆ ನಿರ್ವಹಣೆ ಮಾಡಿತ್ತು ಎಂಬುದು ನಮಗೂ ಗೊತ್ತು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ ಎಂಬುದು ತಿಳಿದಿದ್ದೇವೆ. ಈ ಬಗ್ಗೆ ಪ್ರತಿಪಕ್ಷಗಳು ಸಿದ್ದವಾಗಿದ್ದರೆ ನಾವು ಅದಕ್ಕೂ ಸಿದ್ದ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ವಿಚಾರದಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದು ರಾಜ್ಯಕ್ಕೆ ಗೊತ್ತು. ಅಧಿಕಾರ ಕಳೆದುಕೊಂಡು ಈಗ ಅಸಹಾಯಕರಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ತಮ್ಮ ಅಸಹಾಯಕತೆಯನ್ನು ಎಲ್ಲ ಕಡೆ ಪ್ರಚಾರ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ನೆರೆ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿರ್ವಹಣೆ ಮಾಡಿದೆ ಎಂದು ಅಶ್ವಥ್ ನಾರಾಯಣ್ ಸಮರ್ಥಿಸಿಕೊಂಡರು.