ನವದೆಹಲಿ, ಅ.4- ಕಾಂಗ್ರೆಸ್ ಪ್ರಭಾವಿ ನಾಯಕ ಮತ್ತು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹವಾಲಾ ವ್ಯವಹಾರ ಆರೋಪಗಳಿಗೆ ಸಂಬಂಧಿಸಿದಂತೆ ಸೋದರ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ಇಂದು ಕೂಡ ಮುಂದುವರಿಸಿದೆ.
ದೆಹಲಿಯ ಲೋಕನಾಯಕ ಭವನದಲ್ಲಿರುವ ಇಡಿ ಕೇಂದ್ರ ಕಚೇರಿಗೆ ಇಂದು ಬೆಳಗ್ಗೆ ಹಾಜರಾದ ಡಿ.ಕೆ.ಸುರೇಶ್ ಅವರಿಗೆ ಇಡಿ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆ ಮುಂದುವರಿಸಿದರು.
ಡಿ.ಕೆ.ಶಿವಕುಮಾರ್ ಅವರೊಂದಿಗಿನ ವ್ಯವಹಾರ ದೆಹಲಿ, ಫ್ಲಾಟ್ನಲ್ಲಿ ಲಭಿಸಿದ ಕೋಟ್ಯಂತರ ರೂ. ಹಣ ಸೇರಿದಂತೆ ಸುರೇಶ್ ಅವರ 28 ಆಸ್ತಿ ವಿವರಗಳ ಕುರಿತು ತನಿಖೆ ಮುಂದುವರಿಸಿರುವ ಇಡಿ ಈ ಎಲ್ಲ ವಿವರಗಳ ಬಗ್ಗೆ ಸಂಸದರನ್ನು ತೀವ್ರ ವಿಚಾರಣೆಗೊಳಪಡಿಸಿತು.
ನಿನ್ನೆ ಐದು ತಾಸು ಡಿ.ಕೆ.ಸುರೇಶ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದ ಇಡಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆ ನಂತರ ಡಿ.ಕೆ.ಸುರೇಶ್ ಇಡಿ ಕಾರ್ಯಾಲಯಕ್ಕೆ ತೆರಳಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.
ದೆಹಲಿಯ ಖಾನ್ ಮಾರ್ಕೆಟ್ನಲ್ಲಿರುವ ಲೋಕನಾಯಕ ಭವನದಲ್ಲಿ ಜಾರಿ ನಿರ್ದೇಶನಾಲಯದ ಪ್ರಧಾನ ಕಚೇರಿ ಇದೆ. ಇಡಿ ಸಮನ್ಸ್ ಸೂಚನೆ ಮೇರೆಗೆ ನಿನ್ನೆ ವಿಚಾರಣೆಗೆ ಹಾಜರಾದ ಸಂಸದರಿಗೆ ಇಂದು ಕೂಡ ಕೆಲವು ಪ್ರಮುಖ ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳು ವಿವರಗಳನ್ನು ಕಲೆ ಹಾಕಿದರು.
ಕೆಲವೇ ವರ್ಷಗಳ ಅವಧಿಯಲ್ಲಿ ನಿಮ್ಮ ಆದಾಯ ಮತ್ತು ವಹಿವಾಟು ಕೆಲವು ಪಟ್ಟು ಹೆಚ್ಚಾಗಿದೆ.ಈ ವ್ಯವಹಾರಗಳ ಬಗ್ಗೆ ಸಂಪೂರ್ಣ ಸವಿವರ ನೀಡಿ ಮತ್ತು ನಿಮಗೆ ಸೇರಿದ 28 ಆಸ್ತಿಪಾಸ್ತಿಗಳ ಕುರಿತು ಅಗತ್ಯ ಮಾಹಿತಿಗಳನ್ನು ನಮಗೆ ಒದಗಿಸಿ ಎಂದು ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗರೆದರು.
ಇಂದು ಸಂಜೆವರೆಗೂ ವಿಚಾರಣೆ ಮುಂದುವರಿಯಲಿದೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರನ್ನು ಸಹ ಇಡಿ ಅಧಿಕಾರಿಗಳು ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿದ್ದರು.