ಆಶಾಕಾರ್ಯಕರ್ತೆಯರಿಗೆ 500ರೂ. ಮಾಸಿಕ ವೇತನ ಹೆಚ್ಚಳ

ಬೆಂಗಳೂರು, ಅ.3- ಆಶಾ ಕಾರ್ಯಕರ್ತೆಯರಿಗೆ ಕೊಡ ಮಾಡುವ ಮಾಸಿಕ ನಿಶ್ಚಿತ ಗೌರವಧನವನ್ನು 500ರೂ.ಗೆ ನವೆಂಬರ್ ಒಂದರಿಂದ ಜಾರಿಯಾಗುವಂತೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ವಿಧಾನೌಧದಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಶಾಕಾರ್ಯಕರ್ತೆಯರಿಗೆ 500ರೂ.ಮಾಸಿಕ ವೇತನ ಧನವನ್ನು ಹೆಚ್ಚಳ ಮಾಡಲು ತೀರ್ಮಾನಿಸಿದೆ.

41,425 ಕಾರ್ಯಕರ್ತೆಯರಿಗೆ ಇದರ ಲಾಭ ಸಿಗಲಿದೆ.ಸಂಪುಟ ಸಭೆ ನಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಆಶಾ ಕಾರ್ಯಕರ್ತೆಯರ ಬಹುದಿನದ ಬೇಡಿಕೆಯಂತೆ 500ರೂ.ಗೌರವ ಧನವನ್ನು ಏರಿಕೆ ಮಾಡಲು ತೀರ್ಮಾನಿಸಲಾಗಿದೆ.ರಾಜ್ಯ ಸರ್ಕಾರ ಈವರೆಗೂ 3500 ರೂ. ಹಾಗೂ ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ 2500 ರೂ. ನೀಡುತ್ತಿತ್ತು.ಈಗ 500ರೂ. ಹೆಚ್ಚಳವಾಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ಹೊರೆಯಾಗಲಿದೆ ಎಂದು ವಿವರಿಸಿದರು.

ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜನ್ಮದಿನದ ಪ್ರಯುಕ್ತ 20 ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ.ಇದರಲ್ಲಿ 14 ಹಳೆಯ ಪ್ರಕರಣಗಳಾದರೆ, ಆರು ಪ್ರಸಕ್ತ ವರ್ಷಕ್ಕೆ ಸೇರಿವೆ. ಮುನಿಅಕ್ಕಮ್ಮಯ್ಯ ಎಂಬ ಮಹಿಳಾ ಕೈದಿಯನ್ನು ಮಾನವೀಯ ದೃಷ್ಟಿಯಿಂದ ಬಿಡುಗಡೆ ಮಾಡಲು ರಾಜ್ಯಪಾಲರಿಗೆ ಶಿಫಾರಸು ಮಾಡುವುದಾಗಿ ಹೇಳಿದರು.

ಇದಲ್ಲದೆ, ಕೈಗಾರಿಕಾ ನೀತಿಯಡಿ ಮೆಗಾ/ಅಲ್ಟ್ರಾಮೆಗಾ/ಸೂಪರ್ ಮೆಗಾ ಯೋಜನೆಗಳಿಗೆ ಮತ್ತು ಕರ್ನಾಟಕ ಏರ್‍ಸ್ಪೇಸ್ ನೀತಿಯಡಿ ಎಲೆಕ್ಟ್ರಿಕಲ್ ವೆಹಿಕಲ್ ಆ್ಯಂಡ್ ಎನರ್ಜಿಸ್ಟೋರೇಜ್ ಪಾಲಿಸಿ ಹಾಗೂ ನೂತನ ಜವಳಿ ನೀತಿ ಯೋಜನೆಯಡಿ ಮೆಗಾ ಯೋಜನೆಗಳಿಗೆ ವಿಶೇಷ ರಿಯಾಯಿತಿ ಮತ್ತು ಉತ್ತೇಜನಗಳನ್ನು ಮಂಜೂರು ಮಾಡಲು ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ನಾಲ್ವರು ಸದಸ್ಯರನ್ನೊಳಗೊಂಡ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲಾಗಿದೆ. ಮುಖ್ಯಮಂತ್ರಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು, ಕಂದಾಯ ಸಚಿವರು ಹಾಗೂ ಸಣ್ಣ ಕೈಗಾರಿಕೆ ಸಚಿವರು  ಈ ಸಮಿತಿಯಲ್ಲಿ ಇದ್ದು, ಸಮಿತಿ ನೀಡುವ ಶಿಫಾರಸುಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ವಿವರಿಸಿದರು.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೂರು ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮೇಲ್ದರ್ಜೆಗೆ ಹಾಗೂ ವಸತಿ ಗೃಹ ಕಟ್ಟಡಗಳನ್ನು 20.90 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಜ್ಯದ ನಾಲ್ಕು ಕಡೆ ಹೊಸದಾಗಿ ರಕ್ತನಿಧಿ ಹಾಗೂ ರಕ್ತ ಸಂಗ್ರಹಣೆ ಕೇಂದ್ರಗಳನ್ನು ಪ್ರಾರಂಭಿಸಲು, ವಿಭಾಗೀಯ ಮಟ್ಟದಲ್ಲಿ ನಿರ್ಮಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ. ಪ್ರಸ್ತುತ 41 ಕಡೆ ರಕ್ತನಿಧಿ ಹಾಗೂ ಸಂಗ್ರಹಣೆ ಕೇಂದ್ರಗಳಿವೆ. ಹೊಸದಾಗಿ ನಾಲ್ಕು ಘಟಕಗಳನ್ನು ಸ್ಥಾಪಿಸಲು 12 ಕೋಟಿ ಹಣ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ.

ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ರೆಟ್ಟೆಹಳ್ಳಿಗೆ ಕವಳಿಗುಪ್ಪ ಗ್ರಾಮವನ್ನು  ಸೇರ್ಪಡೆ ಮಾಡಿ ಹಾಲಿ ಇರುವ  ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಗೆ  ಮೇಲ್ದರ್ಜೆಗೇರಿಸಲಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಸುಗುಣಹಟ್ಟಿಯ ಇಂಗಳ ಕೆರೆಯಿಂದ ನೀರು ತುಂಬಿಸಲು 14 ಕೋಟಿ ರೂ.ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ರಾಜ್ಯದ ವಿವಿಧೆಡೆ ಮಾನವ ಮತ್ತು ಆನೆಗಳ ಸಂಘರ್ಷ ತಡೆಗಟ್ಟುವ ಉದ್ದೇಶದಿಂದ ಮೊದಲ ಹಂತದಲ್ಲಿ 118 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಹಳಿ ಸಮೀಪ ಬ್ಯಾರಿಕೇಡ್ ನಿರ್ಮಿಸಲು 100ಕೋಟಿ ಅನುಮೋದನೆಗೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಒಂದು ಕಿ.ಮೀ.ಗೆ 1.20ಕೋಟಿ ವೆಚ್ಚ ತಗುಲಿದೆ. ಮೂರು ವರ್ಷ ಅವಧಿಯಲ್ಲಿ 585ಕಿ.ಮೀ.ಬ್ಯಾರಿಕೇಡ್ ನಿರ್ಮಾಣ ಗುರಿ ಹೊಂದಿದ್ದೇವೆ. ನಾಗರಹೊಳೆ, ಬಂಡೀಪುರ, ಮಡಿಕೇರಿ, ಮಲೆಮಹದೇಶ್ವರ, ಕಾವೇರಿ ವನ್ಯಜೀವಿಧಾಮ, ರಾಮನಗರ, ಬನ್ನೇರುಘಟ್ಟ, ಹಾಸನ ಸೇರಿದಂತೆ ಮತ್ತಿತರ ಕಡೆ ನಿರ್ಮಾಣ ವಾಗಲಿದೆ ಎಂದು ಮಾಹಿತಿ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳಲ್ಲಿ ನೋಟುಪುಸ್ತಕ ಮತ್ತು ಸ್ಟೇಷನರಿ ಖರೀದಿ ಮಾಡಲು 26.76 ಕೋಟಿ ಹಣವನ್ನು ನೀಡಲಾಗಿದೆ.ರಾಜ್ಯದ ಸುಮಾರು 824 ಶಾಲೆ ಮತ್ತು ಕಾಲೇಜುಗಳಿಗೆ ಇದರ ಅನುಕೂಲವಾಗಲಿದ್ದು, ಎಂಎಸ್‍ಐಎಲ್ ಮೂಲಕವೇ ಇದನ್ನು ಖರೀದಿ ಮಾಡಬೇಕೆಂದು ತೀರ್ಮಾನಿಸಲಾಗಿದೆ.

ಇದೇ 10ರಿಂದ ಆರಂಭವಾಗುವ ಅಧಿವೇಶನದಲ್ಲಿ ಜಿಎಸ್‍ಟಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.  ಉಳಿದಂತೆ ಬೆಳಗಾವಿ ಜಿಲ್ಲೆಯ ರಾಯಭಾಗ್, ಚಿಕ್ಕೋಡಿ ಸಮೀಪ ಬ್ಯಾರೇಜ್ ನಿರ್ಮಾಣಕ್ಕೆ 27ಕೋಟಿ, ಹಾವೇರಿ ಜಿಲ್ಲೆ ಬ್ಯಾಡಗಿ ಪುರಸಭೆಗೆ ಅಗಸಹಳ್ಳಿ ಗ್ರಾಮ ಸೇರ್ಪಡೆ ಮಾಡುವುದು, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿಗೆ ಎಣ್ಣೆಹೊಳೆನದಿಯಿಂದ ಕುಡಿಯುವ ನೀರು, ಕಾರ್ಕಳ ಸುತ್ತಮುತ್ತಲ ಗ್ರಾಮಗಳಿಗೆ ಏತ ನೀರಾವರಿ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲು 108 ಕೋಟಿ ಅನುದಾನ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ