ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ನಡೆಯಬೇಕು: ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ: ಎಚ್.ಡಿ.ದೇವೇಗೌಡ

ಬೆಂಗಳೂರು, ಏ.2- ಸರ್ಕಾರದ ಹಿಡಿತದಲ್ಲಿ ಚುನಾವಣೆ ನಡೆಯದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಇಂದಿಲ್ಲಿ ತಿಳಿಸಿದರು.

ನಗರದ ಜೆಪಿ ಭವನದಲ್ಲಿ ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ಸೇರ್ಪಡೆಯಾದ ಅಲ್ತಾಫ್‍ಖಾನ್ ಅವರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿ ಮಾತನಾಡಿದರು.
ರಾಜ್ಯದಲ್ಲಿ ಹಿರಿಯ ಅಧಿಕಾರಿಗಳು ಇದ್ದಾರೆ. ಮುಕ್ತ ಹಾಗೂ ನ್ಯಾಯಸಮ್ಮತ ಮತದಾನ ನಡೆಯಬೇಕಿದೆ. ಸರ್ಕಾರದ ಹಿಡಿತದಲ್ಲಿ ಚುನಾವಣೆ ನಡೆಯಬಾರದು. ಈ ನಿಟ್ಟಿನಲ್ಲಿ ನಾವು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದ್ದೇವೆ ಎಂದರು.

ಪಕ್ಷಕ್ಕೆ ಅಲ್ತಾಫ್‍ಖಾನ್ ಸೇರ್ಪಡೆಗೊಂಡಿದ್ದಾರೆ. ಹೊಸ ಶಕೆ ಆರಂಭವಾಗಿದೆ. ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಚಾಮರಾಜಪೇಟೆಯ ಎಲ್ಲ ಸಮಾಜದವರು ಬೇಸತ್ತಿದ್ದಾರೆ. ಅವರು ಅಲ್ತಾಫ್‍ರನ್ನು ಬೆಂಬಲಿಸಲಿದ್ದಾರೆ. ಬೆಂಗಳೂರಿನಲ್ಲಿ ನವಶಕ್ತಿ ಆರಂಭವಾಗಿದೆ ಎಂದು ಹೇಳಿದರು.
ನಮ್ಮ ಪಕ್ಷದಿಂದಲೇ ಬೆಳೆದು ಅಧಿಕಾರ ಅನುಭವಿಸಿದ್ದರೂ ಅವರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಆದರೆ, ಅವರನ್ನು ನಾವೇ ಉಪಮುಖ್ಯಮಂತ್ರಿ ಮಾಡಿದ್ದೆವು. ಅದು ಅವರಿಗೆ ಸಾಲಲಿಲ್ಲ. ನಮ್ಮ ಪಕ್ಷ ಬಿಟ್ಟು ಬೇರೆ ಪಕ್ಷ ಸೇರಿ ಮುಖ್ಯಮಂತ್ರಿಯಾದರು. ಹಾಗಿದ್ದೂ ಸುಮ್ಮನಾಗಲಿಲ್ಲ. ತಾಯಿ ಸಂಸ್ಥೆಯನ್ನು ಮುಗಿಸಲು ಪ್ರಯತ್ನ ಮಾಡಿದ್ದಾರೆ. ನಮ್ಮ ಪಕ್ಷದವರನ್ನು ಕರೆದುಕೊಂಡು ಹೋದರು. ಅದಕ್ಕೆ ಏಳು ಜನ ಶಾಸಕರು ಸಹಾಯ ಮಾಡಿದ್ದರು. ಅವರ ಹೆಸರು ಹೇಳುವುದೂ ಬೇಡ, ಗುಣಗಾನ ಮಾಡುವುದೂ ಬೇಡ ಎಂದು ನುಡಿದರು.

ಬೂಟಾಟಿಕೆ ಬಹಳ ದಿನ ನಡೆಯುವುದಿಲ್ಲ. ಸ್ವೇಚ್ಛಾಚಾರವಾಗಿ ಮಾತನಾಡಬಾರದು. ತಾಯಿ ಸಂಸ್ಥೆಯನ್ನೇ ಮುಗಿಸಲು ಪ್ರಯತ್ನ ಪಟ್ಟಿದ್ದಾರಲ್ಲ ಅವರು ಇದರ ಬಗ್ಗೆ ಯೋಚನೆ ಮಾಡಬೇಕು. ನಾಲ್ಕು ವರ್ಷಗಳ ಕಾಲ ಹಲವು ಟೀಕೆ-ಟಿಪ್ಪಣಿಗಳನ್ನು ಕೇಳಿದ್ದೇವೆ. ಏ.30ರ ವರೆಗೂ ಸಮಯವಿದೆ. ಅಷ್ಟರಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತವೆ. ಎಲ್ಲವೂ ಅಷ್ಟು ಸುಲಭದಲ್ಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಈದ್ಗಾ ವಿವಾದ ಬಗೆಹರಿಸಿದ್ದು ಯಾರು? ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಿದ್ದು ಯಾರು? ಇದರಿಂದ ಎಷ್ಟು ಮಂದಿಗೆ ಅನುಕೂಲವಾಗಿದೆ. ಆದರೆ, ಬಿ ಟೀಮ್ ಸರ್ಕಾರ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಇಬ್ಬರು ಮುಸ್ಲಿಮರನ್ನು ಮಂತ್ರಿ ಮಾಡುವಾಗ ಅವರೇ ಬೇಡ ಎಂದಿದ್ದರು ಎಂದು ಪರೋಕ್ಷವಾಗಿ ಕಿಡಿಕಾರಿದರು.
ನಾಸಿರ್ ಅವರನ್ನು ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಈ ಬಾರಿ ಜಮೀರ್ ವಿರುದ್ಧ ಅಲ್ತಾಫ್ ಖಾನ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಭವಿಷ್ಯ ನುಡಿದರು.

ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಜೆಡಿಎಸ್‍ಗೆ ಠೇವಣಿಯೂ ಬರಲ್ಲ ಎಂದಿದ್ದೀರಿ. ಯಾರು ಗೆಲ್ಲುತ್ತಾರೋ ಕಾದು ನೋಡಿ ಎಂದರು.
ಮಾತೃಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಇಂತಹವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಜಫ್ರುಲ್ಲಾಖಾನ್ ಮಾತನಾಡಿ, ಒಬ್ಬ ಖಾನ್ ಹೋಗಿದ್ದಾರೆ, ಮತ್ತೊಬ್ಬ ಖಾನ್ ಬಂದಿದ್ದಾರೆ. ನಂಬಿದವರಿಗೆ ಮೋಸ ಮಾಡುವುದು ಮುಸ್ಲಿಂ ಧರ್ಮ ಅಲ್ಲ. ಈಗ ಪಕ್ಷ ಬಿಟ್ಟು ಹೋದವರು ಪಕ್ಷದ ಜತೆ ಧರ್ಮಕ್ಕೂ ಮೋಸ ಮಾಡಿದ್ದಾರೆ ಎಂದು ಜಮೀರ್ ವಿರುದ್ಧ ಕಿಡಿಕಾರಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ