ತುಮಕೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ತೆಗಳಿ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಹೊಗಳಿದ ಬಿಜೆಪಿ ಮುಖಂಡನನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ಮಂಡಳದ ಕಾರ್ಯದರ್ಶಿ ಕೆ. ಶಿವರುದ್ರಯ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಯಡಿಯೂರಪ್ಪ ಮಾಸ್ ಲೀಡರ್, ಅವರಂಥಹ ಮಾಸ್ ಲೀಡರ್ ಬಿಜೆಪಿ ಪಕ್ಷದಲ್ಲಿ ಬೇರೆ ಯಾರು ಇಲ್ಲ. ಯಡಿಯೂರಪ್ಪ ಒಂದು ಕುಗ್ರಾಮಕ್ಕೆ ಹೋದರೂ 5 ಸಾವಿರ ಜನ ಸೇರುತ್ತಾರೆ. ನಳಿನ್ ಕುಮಾರ್ ಕಟೀಲ್ ಬಂದರೆ 5 ಜನನೂ ಸೇರಲ್ಲ ಎಂದು ನಳೀನ್ ಕುಮಾರ್ ಕಟೀಲ್ ಅವರನ್ನು ತೆಗಳಿ ಸಾಮಾಜಿಕ ಜಾಲತಾಣದಲ್ಲಿ ಶಿವರುದ್ರಯ್ಯ ವಿಡಿಯೋ ಹರಿಬಿಟ್ಟಿದ್ದರು.
ಅಲ್ಲದೆ ಗ್ರಾಮ ಪಂಚಾಯ್ತಿಯಲ್ಲೂ ಗೆಲ್ಲಲು ಸಾಮಥ್ರ್ಯ ಇಲ್ಲದವರು ಯಡಿಯೂರಪ್ಪ ಅವರಿಗೆ ಕಿರುಕುಳ ಕೊಡುತ್ತಿದ್ದಾರೆ. ನೆಮ್ಮದಿಯಾಗಿ ಅಧಿಕಾರ ನಡೆಸಲು ಕೊಡುತ್ತಿಲ್ಲ. ಈಗಲಾದರೂ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ನೆಲಕಚ್ಚೊದು ಗ್ಯಾರಂಟಿ ಎಂಬ ಹೇಳಿಕೆ ನೀಡಿ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧ್ಯಕ್ಷ ಜಿ.ಬಿ ಜ್ಯೋತಿಗಣೇಶ್ ಶಿವರುದ್ರಯ್ಯ ಅವರನ್ನು ವಜಾಗೊಳಿಸಿ ಎಂದು ಆದೇಶ ಹೊರಡಿಸಿದ್ದಾರೆ.