ಬೆಂಗಳೂರು, ಸೆ.20- ಸಮ್ಮಿಶ್ರ ಸರ್ಕಾರದಲ್ಲಿ ಕೆಲವರನ್ನು ಪ್ರೀತಿಸಲಾಗುತ್ತಿತ್ತು, ಇನ್ನು ಕೆಲವರನ್ನು ದ್ವೇಷಿಸಲಾಗುತ್ತಿತ್ತು. ಅನುದಾನ ಹಂಚಿಕೆಯಲ್ಲೂ ಬಹಳಷ್ಟು ತಾರತಮ್ಯವಾಗಿತ್ತು. ಹಾಗಾಗಿ ಸರ್ಕಾರ ಪತನವಾಯಿತು ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ.ಸುಧಾಕರ್ ದೂರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕಿತ್ತುಕೊಂಡು ಹೋಗಿ ಕನಕಪುರಕ್ಕೆ ಕೊಟ್ಟಿದ್ದೇಕೆ ? ಅಲ್ಲಿ ರಾಮನಗರ ಮತ್ತು ಮಂಡ್ಯ ಎರಡೂ ಭಾಗದಲ್ಲಿ ಮೆಡಿಕಲ್ ಕಾಲೇಜು ಇರಬೇಕಾದರೆ ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ತೆಗೆದುಕೊಂಡು ಹೋಗಲಾಯಿತು. ಇದರಿಂದ ಚಿಕ್ಕಬಳ್ಳಾಪುರಕ್ಕೆ ಅನ್ಯಾಯವಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಒಂದು ವೇಳೆ ಕನಕಪುರಕ್ಕೆ ಕೊಡುವುದಾದರೆ ಕೊಡಲಿ. ನಮ್ಮ ಅಭ್ಯಂತರವಿರವಿಲ್ಲ. ಆದರೆ, 450 ಕೋಟಿಯನ್ನು ಒಮ್ಮೆಲೆ ಕೊಡುವ ಬದಲು ಚಿಕ್ಕಬಳ್ಳಾಪುರ ಹಾಗೂ ಕನಕಪುರ ಮೆಡಿಕಲ್ ಕಾಲೇಜಿಗೆ ತಲಾ 250 ಕೋಟಿ ಹಂಚಿಕೆ ಮಾಡಬಹುದಿತ್ತು. ಆದರೆ, ಕೆಲವರ ಮೇಲೆ ವಿಶೇಷ ಪ್ರೀತಿ ತೋರಿಸಿ, ಉಳಿದವರನ್ನು ದ್ವೇಷಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಶಾಸಕ ಸ್ಥಾನದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ. ಗ್ರೇಟ್ ಕೆ.ಆರ್.ರಮೇಶ್ಕುಮಾರ್ ಅವರು ಆ ಕೆಲಸ ಮಾಡಿದ್ದಾರೆ. ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದೆ. ಕರ್ನಾಟಕದವರೇ ಆಗಿದ್ದ ನ್ಯಾಯಮೂರ್ತಿಯವರು ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ ಪ್ರಕರಣ ಸೆ.23ಕ್ಕೆ ಮುಂದೂಡಿಕೆಯಾಗಿದೆ. ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ವಿಶ್ವಾಸ ಇದೆ ಎಂದರು.
ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಾನು ಸಂಪೂರ್ಣ ಅರ್ಹನಿದ್ದೇನೆ. ನೇಮಕಾತಿ ಆದೇಶ ಹೊರಡಿಸುವ ವೇಳೆ ನನ್ನ ಬಯೋಡೇಟಾದಲ್ಲಿದ್ದ ಸಂಪೂರ್ಣ ಮಾಹಿತಿಯನ್ನು ನೇಮಕಾತಿ ಆದೇಶದ ಕಡತದಲ್ಲಿ ನಮೂದಿಸಿರಲಿಲ್ಲ. ಹಾಗಾಗಿ ಆ ತಾಂತ್ರಿಕ ಅಂಶವನ್ನು ಮುಂದಿಟ್ಟುಕೊಂಡು ಹೈಕೋರ್ಟ್ ನೇಮಕಾತಿಯನ್ನು ರದ್ದು ಮಾಡಿದೆ.
ಮೂರು ತಿಂಗಳು ನಾನು ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನನ್ನನ್ನು ಅಧ್ಯಕ್ಷನನ್ನಾಗಿ ಮುಂದುವರೆಸುವುದು ಅಥವಾ ಬಿಡುವುದು ಹೊಸ ಸರ್ಕಾರಕ್ಕೆ ಸೇರಿದ ವಿಷಯ ಎಂದರು.
ಸಚಿವರಾಗಿ ಯಾವಾಗ ಪ್ರಮಾಣವಚನ ಸ್ವೀಕರಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ಅವಧೂತ ವಿನಯ್ಗುರೂಜಿ ಅವರನ್ನು ಕೇಳಿಕೊಂಡು ಬಂದು ಆ ಮೇಲೆ ಹೇಳುತ್ತೇನೆ ಎಂದು ವ್ಯಂಗ್ಯವಾಡಿದರು.