ನಮಗೆ ಭಿಕ್ಷೆ ಕೊಡುತ್ತಿಲ್ಲ. ನ್ಯಾಯಯುತವಾಗಿ ಕೊಡಬೇಕಾಗಿದ್ದನ್ನು ನಾವು ಕೇಳಿದ್ದೇವೆ-ಸಿಎಂ ಯಡಿಯೂರಪ್ಪನವರಿಗೆ ಪೊಲೀಸ್ ಸಿಬ್ಬಂದಿಗಳಿಂದ ಪತ್ರ

ಬೆಂಗಳೂರು, ಸೆ.18- ನೀವೇನು ನಮಗೆ ಭಿಕ್ಷೆ ಕೊಡುತ್ತಿಲ್ಲ. ನ್ಯಾಯಯುತವಾಗಿ ಕೊಡಬೇಕಾಗಿದ್ದನ್ನು ನಾವು ಕೇಳಿದ್ದೇವೆ. ಕೊಡುವುದಾದರೆ ಕೊಡಿ, ಇಲ್ಲದಿದ್ದರೆ ಬಿಡಿ… ಇದು ಪೊಲೀಸ್ ಸಿಬ್ಬಂದಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬರೆದಿರುವ ಪತ್ರದ ಸಾರಾಂಶ.

ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ರಾಘವೇಂದ್ರ ಔರಾದ್ಕರ್ ವರದಿಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಟವಾಡುತ್ತಿರುವುದಕ್ಕೆ ನೊಂದಿರುವ ಪೊಲೀಸ್ ಸಿಬ್ಬಂದಿಗಳು ಮುಖ್ಯಮಂತ್ರಿಗಳಿಗೆ ನೊಂದು ಪತ್ರ ಬರೆದಿದ್ದಾರೆ.

ಮೂರು ದಿನಗಳ ಹಿಂದೆ ವೇತನ ಪರಿಷ್ಕರಣೆಗೆ ಆದೇಶಿಸಿ ಡಿಜಿ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಈ ಸುತ್ತೋಲೆಗೆ ತಡೆ ನೀಡಲು ಎಡಿಜಿಪಿ ಆಡಳಿತ ವಿಭಾಗದಿಂದ ಮತ್ತೊಂದು ಸುತ್ತೋಲೆಯನ್ನು ಹೊರಡಿಸಲಾಗಿದೆ.

ಇದೀಗ ಡಿಜಿ ಕಚೇರಿ ಅಥವಾ ಸರ್ಕಾರದಿಂದ ಸುತ್ತೋಲೆ ಬರುವವರೆಗೂ ಹಿಂದಿನ ಆದೇಶಕ್ಕೆ ತಡೆ ನೀಡುವಂತೆ ಎಡಿಜಿಪಿ ಆಡಳಿತ ವಿಭಾಗ ಸುತ್ತೋಲೆ ಹೊರಡಿಸಿದೆ.

ಇದು ಇನ್ನಷ್ಟು ದಿನಗಳ ಕಾಲ ಮುಂದೂಡುವ ಸಾಧ್ಯತೆ ಇರುವುದರಿಂದ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ನಿರಾಶೆ ತಂದಿದೆ.ಇದರಿಂದ ನೊಂದ ಸಿಬ್ಬಂದಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ:
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಮಾನ್ಯ ಕರ್ನಾಟಕ ಸರ್ಕಾರದ ಗೃಹ ಮಂತ್ರಿಗಳೇ, ಸ್ವಾಮಿ ನಿಮಗೊಂದು ಕರ್ನಾಟಕ ರಾಜ್ಯದ ಬಡ ನೊಂದ ಪೊಲೀಸರ ಒಂದು ಮನವಿ.

ಮೂರು ವರ್ಷಗಳಿಂದ ಕರ್ನಾಟಕ ರಾಜ್ಯದ ಪೊಲೀಸರ ಜೀವನ ಮಟ್ಟವನ್ನು ಸುಧಾರಿಸಲು ಔರಾದ್ಕರ್ ವರದಿ ಎಂಬ ಆಶಾ ಬೆಳಕು ಪೊಲೀಸರ ಜೀವನದಲ್ಲಿ ಪ್ರತಿದಿನ ಚೆಲ್ಲಾಟವಾಡುತ್ತಿದೆ.

ಬೆಳಿಗ್ಗೆ ಸಂಬಳ ಹೆಚ್ಚುವರಿ ಎಂದು ಒಂದು ಆದೇಶ ಅದೇ ದಿನ ಸಂಜೆ ಮತ್ತೊಂದು ಸಂಬಳ ರದ್ದುಗೊಳಿಸಿರುವ ಆದೇಶ.

ಏಕೆ ಸ್ವಾಮಿ, ನಮ್ಮ ಮೇಲೆ ಇಷ್ಟು ಕೋಪ, ನಮ್ಮ ಜೀವಗಳಿಗೆ ಬೆಲೆ ಇಲ್ಲವೇ. ಪೊಲೀಸರ ಕುಟುಂಬಗಳು ಸಾಮಾಜಿಕ , ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸುಧಾರಣೆಯಾಗುವುದು ನಿಮಗೆ ಇಷ್ಟವಿಲ್ಲವೇ.

ಪೊಲೀಸರು ಸಮಾಜದಲ್ಲಿ ಸಾಮಾಜಿಕವಾಗಿ ಮೇಲೆ ಬಂದು ಉತ್ತಮ ಜೀವನ ನಡೆಸುವುದು ನಿಮಗೆ ಇಷ್ಟವಿಲ್ಲವೇ. ಪ್ರತಿ ದಿನ ಮಾಧ್ಯಮಗಳಲ್ಲಿ ಬರುವ ಔರದ್ಕರ್ ವರದಿಯ ಬಗ್ಗೆ ಮಾನಸಿಕವಾಗಿ ಪ್ರತಿಕ್ಷಣವೂ ನೋವುಂಟು ಮಾಡಿದೆ.

ಸ್ವಾಮಿ ಔರಾದ್ಕರ್ ವರದಿ ಬೇಕು ಆದರೆ ಈ ರೀತಿ ನಮಗೆ ಭಿಕ್ಷೆ ಹಾಕುವ ರೀತಿಯಲ್ಲಿ ಕೊಡಲೋ ಬೇಡವೋ ಕೊಡಲೋ ಬೇಡವೋ ಎಂಬ ರೀತಿಯಲ್ಲಿ ಚಿತ್ರ ಹಿಂಸೆ ನೀಡಿ ಪ್ರತಿದಿನ ಸಾಯಿಸುತ್ತಿದ್ದಿರಾ.

ಸ್ವಾಮಿ ಕೊನೆಯದಾಗಿ ದಯಮಾಡಿ ಔರದ್ಕರ್ ವರದಿಯನ್ನು ನೀಡುವ ಮನಸ್ಥಿತಿ ಇದ್ದರೆ ನೀಡಿ, ಇಲ್ಲವಾದಲ್ಲಿ ಸಾಧ್ಯವಿಲ್ಲ ಎಂದಾದರೂ ಹೇಳಿ. ಪ್ರತಿ ದಿನ ಪ್ರತಿ ಕ್ಷಣ ಕರ್ನಾಟಕ ರಾಜ್ಯದ ಬಡ ಪೊಲೀಸರ ಜೀವಗಳ ಜೊತೆ ಚೆಲ್ಲಾಟವಾಡಬೇಡಿ ನಮಗೆ ಕರ್ತವ್ಯ ನಿರ್ವಹಿಸಲು ಆತ್ಮಸ್ಥೈರ್ಯವನ್ನು ಕುಗ್ಗಿಸಬೇಡಿ.

ಇಂತಿ
ಕರ್ನಾಟಕ ರಾಜ್ಯದ ನೊಂದ ಬಡ ಪೊಲೀಸ್ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಮತ್ತು ಇವರ ಕುಟುಂಬ ವರ್ಗದವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ