ಭೇಟಿಗೆ ಸಮಯ ನಿಗದಿಯಾದರೆ ಸಂಜೆ ಸಿಎಂ ಯಡಿಯೂರಪ್ಪ ನವದೆಹಲಿಗೆ

ಬೆಂಗಳೂರು, ಸೆ.18- ನಾಲ್ಕೂವರೆ ದಶಕಗಳ ನಂತರ ಭೀಕರ ಪ್ರವಾಹಕ್ಕೆ ಸಿಲುಕಿರುವ ರಾಜ್ಯಕ್ಕೆ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಿಗೆ ಮನವರಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ದೆಹಲಿಗೆ ತೆರಳುವ ಸಾಧ್ಯತೆಗಳಿವೆ.

ನಾಳೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಅವರ ಭೇಟಿಗೆ ಯಡಿಯೂರಪ್ಪ ಸಮಾಯಾವಕಾಶ ಕೋರಿದ್ದಾರೆ.

ಆದರೆ, ಪ್ರಧಾನಿ ಕಾರ್ಯಾಲಯದಿಂದ ಈವರೆಗೂ ಮುಖ್ಯಮಂತ್ರಿಗಳಿಗೆ ಭೇಟಿಯ ಸಮಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿಲ್ಲ ಎಂದು ತಿಳಿದು ಬಂದಿದೆ.

ಒಂದು ವೇಳೆ ಸಂಜೆಯೊಳಗೆ ಪ್ರಧಾನಿ ಕಾರ್ಯಾಲಯದಿಂದ ಭೇಟಿಗೆ ಸಮಯ ನಿಗದಿಯಾದರೆ ಸಂಜೆ ಬಿಎಸ್‍ವೈ ನವದೆಹಲಿಗೆ ತೆರಳಲಿದ್ದಾರೆ.

ರಾಜ್ಯದಲ್ಲಿ 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ನಿರೀಕ್ಷೆಗೂ ಮೀರಿದ ನಷ್ಟ ಸಂಭವಿಸಿದೆ. ತಕ್ಷಣವೇ ಸಂತ್ರಸ್ತರಿಗೆ ಕೇಂದ್ರದಿಂದ ಪರಿಹಾರ ಬಿಡುಗಡೆ ಮಾಡಬೇಕೆಂದು ಪ್ರಧಾನಿ ಸೇರಿದಂತೆ ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.

ರಾಜ್ಯ ಸರ್ಕಾರ ತನ್ನ ಇತಿಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಪರಿಹಾರ ಕಾರ್ಯ ಕೈಗೊಂಡಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವುದು, ಗಂಜಿ ಕೇಂದ್ರಗಳ ಪ್ರಾರಂಭ, ಜಾನುವಾರುಗಳ ರಕ್ಷಣೆಗೆ ಆದ್ಯತೆ ಕೊಡಲಾಗಿದೆ.

ಈಗಾಗಲೇ ಕೇಂದ್ರದಿಂದ ಅಧ್ಯಯನ ತಂಡ ಬಂದು ರಾಜ್ಯದ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದೆ. ಹೀಗಾಗಿ ಕೂಡಲೇ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿ ಮೇಲೆ ಒತ್ತಡ ಹಾಕಲಿದ್ದಾರೆ.

ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡದೇ ಇರುವುದರಿಂದ ಸಾರ್ವಜನಿಕರು ಕೂಡ ಆಕ್ರೋಶ ಗೊಂಡಿದ್ದಾರೆ. ರಾಜ್ಯ ಸರ್ಕಾರ ಎಷ್ಟೇ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದರೂ ಸಂತ್ರಸ್ತರಿಗೆ ನಾವು ನೀಡುತ್ತಿರುವುದು ಭಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.

ರಾಜ್ಯದ ಪಾಲಿನ ಪರಿಹಾರವನ್ನು ಕೇಂದ್ರ ಬಿಡುಗಡೆ ಮಾಡಿದರೆ ನಾವೂ ಕೂಡ ಪರಿಹಾರ ಕಾರ್ಯ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂಬುದರ ಬಗ್ಗೆ ಸಿಎಂ ವಿವರಣೆ ನೀಡುವರು.

ಈಗಾಗಲೇ ಮನೆಗಳ ನಿರ್ಮಾಣಕ್ಕೆ ತಳಪಾಯ ಹಾಕಿದರೆ ಒಂದು ಲಕ್ಷ, ಸಂಪೂರ್ಣ ಮನೆ ನಿರ್ಮಾಣಕ್ಕೆ ಐದು ಲಕ್ಷ ಪರಿಹಾರ, ಜಾನುವಾರುಗಳು ಕೊಚ್ಚಿ ಹೋಗಿದ್ದರೆ ಆರ್ಥಿಕ ನೆರವು, ಮನೆ ರಿಪೇರಿಗೆ 50 ಸಾವಿರ ಸೇರಿದಂತೆ ನಾನಾ ರೀತಿಯ ಕಾರ್ಯಗಳನ್ನು ಕೈಗೊಂಡಿದ್ದೇವೆ. ಆದರೆ, ಭಾರೀ ಪ್ರಮಾಣದ ನಷ್ಟವಾಗಿರುವುದರಿಂದ ಸರ್ಕಾರದ ಕ್ರಮ ಏನೇನು ಸಾಲದು.

ಕೇಂದ್ರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂಬುದನ್ನು ಗುರಿಯಾಗಿಟ್ಟುಕೊಂಡು ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈಗಾಗಲೇ ಕಾಂಗ್ರೆಸ್ ಹಲವರು ಕಡೆ ಪ್ರತಿಭಟನೆ ಮಾಡುತ್ತಿದೆ ಯಾವುದೇ ಸಂದರ್ಭದಲ್ಲೂ 17ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಬಹುದು. ಪರಿಹಾರ ಬಂದಿಲ್ಲ ಎಂಬುದನ್ನೇ ಪ್ರತಿ ಪಕ್ಷಗಳು ಅಸ್ತ್ರ ಮಾಡಿಕೊಂಡರೆ ನಮಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ರಾಜ್ಯಕ್ಕೆ ಹಣ ಬಿಡುಗಡೆ ಮಾಡಬೇಕೆಂದು ಕೇಂದ್ರಕ್ಕೆ ಯಡಿಯೂರಪ್ಪ ಮನವಿ ಮಾಡಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ