ಬೆಂಗಳೂರು, ಸೆ.17-ಈರುಳ್ಳಿ ಮತ್ತಿತರ ಬೆಳೆ ಬೆಳೆಯುವ ರೈತರ ಸ್ಥಿತಿ ಗಂಭೀರವಾಗಿದೆ. ಸರ್ಕಾರ ರೈತರ ಸಮಸ್ಯೆಗಳ ಕಡೆ ಗಮನಹರಿಸದೇ ಹೋದರೆ ದೇಶದ ಅಭಿವೃದ್ಧಿ ಕುಂಠಿತವಾಗಲಿದೆ ಎಂದು ಮಾಜಿ ಶಾಸಕ ಮಹಿಮಾ ಪಟೇಲ್ ಆತಂಕ ವ್ಯಕ್ತಪಡಿಸಿದರು.
ನಗರದ ಯಶವಂತಪುರ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈರುಳ್ಳಿ ಸೇರಿದಂತೆ ಇನ್ನಿತರ ಬೆಳೆ ಬೆಳೆಯುವ ರೈತರು ಇಂದು ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಕಷ್ಟ ಬಗೆಹರಿಸಬೇಕು ಎಂದು ಹೇಳಿದರು.
ಚಂದನ ವಾಹಿನಿ ನಿರ್ದೇಶಕ ಡಾ.ಮಹೇಶ್ ಜೋಷಿ ಮಾತನಾಡಿ, ಊಟಕ್ಕೂ-ಉಪಹಾರಕ್ಕೂ ಬಳಕೆಯಾಗುವ ಈರುಳ್ಳಿ ನಮ್ಮ ರೈತರಿಗೆ ಅನೇಕ ಬಾರಿ ಕಣ್ಣೀರು ತರಿಸಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಮಾತನಾಡಿ ಕೇವಲ ಐಟಿ-ಬಿಟಿ ಅಭಿವೃದ್ಧಿ ಕಡೆಗೆ ಹೆಚ್ಚು ಒತ್ತು ನೀಡಿದರೆ ಹೇಗೆ?ಮನುಷ್ಯರು ಏನು ಆಹಾರ ಸ್ವೀಕರಿಸಬೇಕು. ಆದರೆ ಅನ್ನ ಬೆಳೆಯುವ ರೈತನಿಗೆ ಪರಿಹಾರ ಸಿಗುವ ಕೆಲಸಗಳು ಆಗಬೇಕು. ರೈತ ದೇಶದ ಬೆನ್ನೆಲುಬು ಆದರೆ ಅವನ ಬೆನ್ನಲುಬು ಮುರಿಯುವಂತಹ ಕೆಲಸ ನಡೆಯುತ್ತಿದೆ. ಅತಿವೃಷ್ಟಿ-ಅನಾವೃಷ್ಟಿಯಿಂದ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ ಎಂದು ತಿಳಿಸಿದರು.
ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಅಧ್ಯಕ್ಷೆ ಹಾಗೂ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ ದೇಶಿ ಸಂಸ್ಕøತಿಯ ಕೃಷಿ ಪದ್ಧತಿಯಾದ ಸಾವಯವ ಕೃಷಿ ಪದ್ಧತಿಯನ್ನು ಇಂದು ಸಾವು ಅಳವಡಿಸಿಕೊಳ್ಳಬೇಕಿದೆ. ಎಲ್ಲಾ ಬೆಳೆಗಳಿಗೂ ಒಕ್ಕೂಟಗಳಿವೆ, ನಿಗಮಗಳಿವೆ. ಆದರೆ ಈರುಳ್ಳಿ ಬೆಳೆಗಾರರ ಒಕ್ಕೂಟವಿರಲಿಲ್ಲ. ಇದನ್ನು ಗಮನಿಸಿ ಸುಮಾರು ಹತ್ತು ಜಿಲ್ಲೆಗಳಿಂದ 200ಕ್ಕೂ ಹೆಚ್ಚು ರೈತರು ಒಗ್ಗೂಡಿ ಒಕ್ಕೂಟ ರಚನೆ ಮಾಡಿಕೊಂಡಿದ್ದೇವೆ ಎಂದರು.
ಸಮಾರಂಭದಲ್ಲಿ ಗುರುಸ್ವಾಮಿ, ಮಹಾಂತೇಶ್, ಲಕ್ಷಣಹಬ್ಬ, ಡಾ.ಮಹಾಂತೇಶ್ ಚರಂತಿಮಠ ಮತ್ತಿತರರಿದ್ದರು.